ಕರ್ನಾಟಕ

ಸದನದೊಳಗೆ ಯಾರು ಮೊಬೈಲ್ ತರುವುದು ಬೇಡ’; ಸಿಎಂ ಸಿದ್ದರಾಮಯ್ಯ

Pinterest LinkedIn Tumblr

siddu

ಬೆಳಗಾವಿ: ಸದನದಲ್ಲಿ ಪ್ರಭು ಚೌಹಾಣ್ ಮೊಬೈಲ್ ವೀಕ್ಷಣೆ ವಿಚಾರ ವಿಧಾನಪರಿಷತ್ತಿನಲ್ಲೂ ಪ್ರತಿಧ್ವನಿಸಿತು. ಉಭಯ ಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸಿ, ಧರಣಿ ಕೈಗೊಂಡಿದ್ದರು. ಸದನದಲ್ಲಿ ಮೊಬೈಲ್ ನಿಷೇಧ ಮಾಡುವ ಕುರಿತು ಸಮಿತಿ ರಚಿಸುವಂತೆ ಉಭಯ ಪಕ್ಷಗಳ ಕಾರ್ಯಕರ್ತರು ವಿಧಾನಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಿಎಂ.ಸಿದ್ದರಾಮಯ್ಯ, ನೈತಿಕ ಸಮಿತಿ ಕೇವಲ ಪೇಪರ್‌ನಲ್ಲಿ ಮಾತ್ರ ಕಾಣಬಾರದು. ನೈತಿಕತೆಯನ್ನು ನಮ್ಮಲ್ಲಿ ನಾವೇ ಅಳವಡಿಸಿಕೊಳ್ಳಬೇಕು. ಹಾಗಾಗಿ ನಾಳೆಯಿಂದ ಸದನದೊಳಗೆ ಯಾರು ಮೊಬೈಲ್‌ಗಳನ್ನು ತರುವುದು ಬೇಡ ಎಂದು ವಿನಯದಿಂದ ಮನವಿ ಮಾಡಿದರು.

ಅಶ್ಲೀಲ ಚಿತ್ರ ನೋಡುವುದು ನಾಗರೀಕ ಸಂಸ್ಕೃತಿಯಲ್ಲ, ಸದನದೊಳಗೆ ಮೊಬೈಲ್‌ನಲ್ಲಿ ಅದು-ಇದು ನೋಡುವುದು, ಎಸ್‌ಎಂಎಸ್ ಮಾಡುವುದು ಸರಿಯಲ್ಲ. ಸದನದೊಳಗೆ ಮೊಬೈಲ್ ನಿಷೇಧ ಮಾಡುವ ಕುರಿತು ಸಮಿತಿ ರಚಿಸುವುದರಿಂದ ಸರಿಯಾಗದು. ನೈತಿಕ ಸಮಿತಿ ಕೇವಲ ಪೇಪರ್‌ನಲ್ಲಿ ಮಾತ್ರ ಕಾಣಬಾರದು, ಅದನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ವಿಧಾನಸಭೆಯಲ್ಲಿ ನಡೆದ ತಪ್ಪಿಗಾಗಿ, ವಿಧಾನ ಪರಿಷತ್ತಿನಲ್ಲಿ ಧರಣಿ ಮಾಡುವುದು ಸೂಕ್ತವಲ್ಲ. ಜನತೆ ನಮ್ಮನ್ನು ವೀಕ್ಷಿಸುತ್ತಿರುತ್ತಾರೆ. ನಮಗೆ ನಾವೇ ನಿಯಂತ್ರಣ ಮಾಡಿಕೊಳ್ಳಬೇಕು. ಕಳೆದ ವಿಧಾನಮಂಡಲ ಅಧಿವೇಶನ ವೇಳೆ ಬಿಜೆಪಿ ಶಾಸಕರು ಅಶ್ಲೀಲ ಚಿತ್ರ ವೀಕ್ಷಣೇ ಮಾಡಿದ್ದರು. ಮತ್ತೆ ಅದೇ ಘಟನೆ ಮರುಕಳಿಸಿದೆ. ಅಲ್ಲದೇ ಸದನದಲ್ಲಿ ಕಾಂಗ್ರೆಸ್ ನಾಯಕರೂ ಸಹಾ ಇಂತದ್ದೇ ವರ್ತನೆ ತೋರಿದ್ದಾರೆ. ಅಂಬರೀಶ್ ಮಾಡಿದ್ದರೂ ತಪ್ಪೇ, ಬೇರೆ ಯಾರು ಮಾಡಿದ್ದರೂ ತಪ್ಪು ತಪ್ಪೇ ಎಂದು ಅಸಮಾಧಾನ ಹೊರ ಹಾಕಿದರು.

ಸದನದಲ್ಲಿ ಇಂತಹ ಚಿತ್ರಗಳನ್ನು ವೀಕ್ಷಿಸಿದ್ದು, ಖಂಡನೀಯ ವಿಚಾರ. ನಾಳೆಯಿಂದ ಎಲ್ಲರು ಸ್ವಪ್ರೇರಣೆಯಿಂದಲೇ ಸದನದಲ್ಲಿ ಮೊಬೈಲ್ ನಿಷೇಧ ಮಾಡೋಣ ಎಂದು ಮನವಿ ಮಾಡಿದರು. ಸಿಎಂ ಹೇಳಿಕೆ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತಮ್ಮ ಧರಣಿಯಿಂದ ವಾಪಾಸ್ಸಾದರು.

Write A Comment