ಬೆಂಗಳೂರು: ‘ಸಾಗರಕ್ಕೆ ಮುಖಮಾಡಿದ ಮಂಗಳೂರು ಶೈಲಿ ಮನೆಯ ಬಾಲ್ಕನಿ ಮೇಲೆ ಮಡಿವಾಳ ಹಕ್ಕಿಯೊಂದು ಕುಳಿತಿರಬೇಕು. ಹಿನ್ನೆಲೆಯಲ್ಲಿ ಸಾಗರದ ಅಲೆಗಳು ಉಕ್ಕುತ್ತಿರಬೇಕು. ಮನೆಯ ಮುಂದೆ ಒಂದು ತೆಂಗಿನ ಮರವೂ ಅದರ ಪಕ್ಕ ಒಂದು ಅಡಿಕೆ ಮರವೂ ಇರಬೇಕು. ಅದರ ನೆರಳಿನಲ್ಲಿ ಕುದುರೆ ಸವಾರನೊಬ್ಬ ಬರುತ್ತಿರಬೇಕು’
–ಹಿರಿಯ ವನ್ಯಜೀವಿ ತಜ್ಞರಾಗಿದ್ದ ಜಾಫರ್ ಫತೇಹ್ಅಲಿ ಅವರು ತಮ್ಮ ‘ದಿ ಸಾಂಗ್ ಆಫ್ ದಿ ಮ್ಯಾಗ್ಪೈ ರಾಬಿನ್’ ಕೃತಿಯ ರಕ್ಷಾಪುಟದ ಕನಸನ್ನು ಸಹ ಲೇಖಕ ಆಶಿಶ್ ಚಂಡೋಲಾ ಅವರೊಂದಿಗೆ ಹಂಚಿಕೊಂಡ ರೀತಿ ಇದಾಗಿತ್ತು.
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ)ಯಲ್ಲಿ ಬುಧವಾರ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಸ್ವತಃ ಚಂಡೋಲಾ ಆ ಘಟನೆಯನ್ನು ಮೆಲುಕು ಹಾಕಿದರು.
‘ರಕ್ಷಾಪುಟದ ಚಿತ್ರ ವಾಟರ್ ಕಲರ್ನಲ್ಲೇ ಮೂಡಿ ಬರಬೇಕು ಎನ್ನುವ ಅಪೇಕ್ಷೆಯೂ ಅವರದಾಗಿತ್ತು. ಅವರ ಅಪೇಕ್ಷೆಯಂತೆಯೇ ವರ್ಣಚಿತ್ರ ರಕ್ಷಾಪುಟವನ್ನು ಅಲಂಕರಿಸಿದೆ. ಆದರೆ, ಕಣ್ತುಂಬಿಕೊಳ್ಳಲು ಅವರೇ ಇಲ್ಲ’ ಎಂದು ವಿಷಾದದ ನಿಟ್ಟುಸಿರುಬಿಟ್ಟರು.
ಪುಸ್ತಕ ಬಿಡುಗಡೆ ಒಂದು ನೆಪವಾಗಿ ಜಾಫರ್ ಅವರ ನೆನಪುಗಳು ಅಲ್ಲಿ ಅಲೆ, ಅಲೆಯಾಗಿ ತೇಲಿಬಂದು ಅವರ ಒಡನಾಡಿಗಳಿಗೆಲ್ಲ ಹಿತವಾದ ಅನುಭವ ನೀಡುತ್ತಿದ್ದವು. ನಾಲ್ಕು ದಶಕಗಳ ಕಾಲ ಜಾಫರ್ ಅವರ ಒಡನಾಡಿ ಆಗಿದ್ದ ಕ್ಯಾಪ್ಟನ್ ಎಸ್. ಪ್ರಭಲಾ ಅವರು , ಕೃತಿಯಲ್ಲಿನ ಒಂದು ಪ್ರಸಂಗವನ್ನು ಓದಿದರು:
‘ಸಲೀಂ ಅಲಿ ಮತ್ತು ನಾನು ಒಮ್ಮೆ ಕಚ್ನ ಪ್ರದೇಶವೊಂದಕ್ಕೆ ತೆರಳಿದ್ದೆವು. ಅಲ್ಲಿ ವಿಷಪೂರಿತ ಹಾವುಗಳೇ ತುಂಬಿದ್ದವು. ಹಾವು ಕಚ್ಚಿದರೆ ಚಿಕಿತ್ಸೆ ನೀಡಲು ಸಲೀಂ ತಂದಿದ್ದ ಕಿಟ್ ನೋಡಿದೆ. ಅದನ್ನು ಉಪಯೋಗಿಸಿ ಹಿಂಸೆ ಮಾಡುವುದಕ್ಕಿಂತ ಹಾವು ಕಚ್ಚಿಸಿಕೊಂಡ ವ್ಯಕ್ತಿಯನ್ನು ಸುಮ್ಮನೆ ಸಾಯಲು ಬಿಡುವುದೇ ಒಳಿತು ಎನಿಸಿತು..’ ವಾಕ್ಯ ಪೂರ್ಣಗೊಳ್ಳುವ ಮುನ್ನವೇ ನಗೆಯ ಅಲೆ ಎದ್ದಿತು.
‘ಒಳ್ಳೆಯ ಕುದುರೆ ಸವಾರರಾಗಿದ್ದ ಜಾಫರ್ 70ರ ದಶಕದಲ್ಲಿ ತಮ್ಮ ಮನೆಯಿಂದ ಹಲಸೂರು ಕೆರೆಗೆ ಕುದುರೆ ಮೇಲೇ ಬರುತ್ತಿದ್ದರು. ಒಮ್ಮೆ ಅವರು ದೀರ್ಘ ಕಾಲ ಊರಿಗೆ ಹೋಗುವ ಪ್ರಸಂಗ ಬಂದಾಗ ಕುದುರೆಯನ್ನು ನಮ್ಮ ಮನೆಯಲ್ಲಿ ಬಿಟ್ಟಿದ್ದರು’ ಎಂದು ಕ್ಯಾಪ್ಟನ್ ನೆನಪು ಮಾಡಿಕೊಂಡರು.
‘ಪಕ್ಷಿಗಳು ಮತ್ತು ಕುದುರೆಗಳು ಯಾವಾಗಲೂ ಮದಿರೆ ಮತ್ತು ಮಾನಿನಿಯರಿಗಿಂತ ಉತ್ತಮ’ ಎಂಬ ಜಾಫರ್ ಮಾತಿನ ಪ್ರಸ್ತಾಪವಾದಾಗ ಸಭೆಯಲ್ಲಿ ಮತ್ತೆ ನಗೆಯ ಅಲೆ. ಸಭಿಕರಲ್ಲಿ ಕೆಲವರು ಜಾಫರ್ ನೀಡುತ್ತಿದ್ದ ಔತಣವನ್ನು ನೆನೆದಾಗ ಎಲ್ಲರ ಬಾಯಲ್ಲೂ ನೀರೂರಿತ್ತು.
ಪುಸ್ತಕ ಬಿಡುಗಡೆ ಮಾಡಿದ ಹಿರಿಯ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ, ‘ದೇಶದ ವನ್ಯಜೀವಿ ವೈವಿಧ್ಯವನ್ನು ಕಾಪಾಡಲು ಜಾಫರ್ ಕೊಟ್ಟ ಕಾಣ್ಕೆ ಬಲು ದೊಡ್ಡದು’ ಎಂದು ಕೊಂಡಾಡಿದರು. ‘70ರ ದಶಕದಲ್ಲಿ ನಮ್ಮಂತಹ ಯುವಕರು ಈ ಕ್ಷೇತ್ರಕ್ಕೆ ಬರಲು ಅವರ ಶ್ರಮವೇ ಕಾರಣ’ ಎಂದು ಕೃತಜ್ಞತೆಯಿಂದ ಸ್ಮರಿಸಿದರು.
ಕವ್ವಾಲಿ ಗಾಯಕರಾಗಿದ್ದ ಜಾಫರ್ ಹಲವು ಕಛೇರಿಗಳನ್ನೂ ನೀಡಿದ್ದರು ಎಂದು ಅವರ ಒಡನಾಡಿಯೊಬ್ಬರು ಹೇಳಿದರು. ಲೇಖಕಿ ಡಾ. ಲತಾ ಮಣಿ ಕೆಲವು ನೆನಪುಗಳನ್ನು ಮೆಲುಕು ಹಾಕಿದರು.
ಯಾರು ಈ ಜಾಫರ್?
ಜಾಫರ್ ಫತೇಹ್ಅಲಿ (1920–2013) ದೇಶದ ಹೆಸರಾಂತ ವನ್ಯಜೀವಿ ತಜ್ಞರಾಗಿದ್ದರು. ಪರಿಸರ ರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದ ಅವರು, ಕಾಡುಗಳ ರಕ್ಷಣೆ ರಾಷ್ಟ್ರದ ಪ್ರಮುಖ ಆದ್ಯತೆ ಆಗಬೇಕು ಎಂದು ಪ್ರತಿಪಾದಿಸಿದ್ದರು.
ಹುಲಿ ಯೋಜನೆ ಸೇರಿದಂತೆ ದೇಶದ ಎಲ್ಲ ಪ್ರಮುಖ ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ಅವರು ಮುಖ್ಯಸ್ಥರಾಗಿ ದುಡಿದಿದ್ದರು. ‘ದಿ ಸಾಂಗ್ ಆಫ್ ದಿ ಮ್ಯಾಗ್ಪೈ ರಾಬಿನ್’ ಜಾಫರ್ ಅವರ ಆತ್ಮಚರಿತ್ರೆ. ಕಳೆದ ವರ್ಷ ಕೃತಿಯ ಹಸ್ತಪ್ರತಿ ಸಿದ್ಧವಾದ ಬಳಿಕ ಅವರು ಕಣ್ಮುಚ್ಚಿದ್ದರು.