ಕರ್ನಾಟಕ

ಬೆಳಗಾವಿ ಅಧಿವೇಶನ: ಒಳಗೊಳಗೇ ಕುದಿಯುವ ಮನಸ್ಸು ಆಗಾಗ ಸ್ಫೋಟ

Pinterest LinkedIn Tumblr

pvec11decsWS-BGV-AB-17

ಸುವರ್ಣ ವಿಧಾನಸೌಧ (ಬೆಳಗಾವಿ): ಕಬ್ಬು ಬೆಳೆ­ಗಾರರ ಸಮಸ್ಯೆ ಕುರಿತಂತೆ ಮಂಗಳವಾರ ವಿಧಾನ ಮಂಡಲದಲ್ಲಿ ನಡೆದ ಕೋಲಾಹಲ ಬುಧವಾರ ಮುಂದು­ವರಿಯಲಿಲ್ಲ. ಆದರೆ ಸಣ್ಣಪುಟ್ಟ ಗಲಾಟೆ­ಯಿಂದ ಮಾತ್ರ ಮುಕ್ತವಾಗಿರಲಿಲ್ಲ. ಬೆಳಿಗ್ಗೆ 9.30ರಿಂದ ನಡೆದ ಶಾಸಕಾಂಗ ಪಕ್ಷದ ಸಭೆ­ಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಕಾಂಗ್ರೆಸ್ ಶಾಸಕರು ಸದನಕ್ಕೆ ಬಂದ ನಂತರ ಸುಮ್ಮನಿ­ದ್ದರು. ಆದರೆ ಒಳಗೊಳಗೇ ಕುದಿಯುವ ಮನಸ್ಸು ಆಗಾಗ ಸ್ಫೋಟಗೊಳ್ಳುತ್ತಿತ್ತು. ಇಂತ­ಹದೇ ಸಮಸ್ಯೆ ಜೆಡಿಎಸ್‌ನಲ್ಲಿಯೂ ಕಂಡು­ಬಂತು.

ಪ್ರಶ್ನೋತ್ತರ ಅವಧಿಯಲ್ಲಿ ಶೃಂಗೇರಿ ಶಾಸಕ ಡಿ.ಎನ್.ದೇವರಾಜ್ ಅವರು ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿಯಲ್ಲಿ 3054 ಶೀರ್ಷಿಕೆಯ ಹಣವನ್ನು 5054 ಶೀರ್ಷಿಕೆಗೆ ಬದಲಾಯಿಸಿ­ದ್ದನ್ನು ಪ್ರಸ್ತಾಪಿಸಿದರು. ಇದಕ್ಕೆ ಗ್ರಾಮೀಣಾ­ಭಿವೃದ್ಧಿ ಸಚಿವ ಎಚ್.ಕೆ.ಪಾಟೀಲರ ಅನುಪಸ್ಥಿತಿ­ಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಉತ್ತರ ನೀಡುತ್ತಿದ್ದಾಗ ಎದ್ದುನಿಂತ ಬಸವರಾಜ ರಾಯರೆಡ್ಡಿ, ‘ಅಧಿಕಾರಿಗಳು ಹಣ ಲೂಟಿ ಮಾಡುತ್ತಿದ್ದಾರೆ.

ಯಾವ ಅಧಿಕಾರಿಯ ಮೇಲೂ ಸರ್ಕಾರ ಕ್ರಮ ಕೈಗೊಂಡಿಲ್ಲ’ ಎಂದು ರೇಗಿ­ದರು. ಇದಕ್ಕೆ ದನಿಗೂಡಿಸಿದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ‘ಪಾರದರ್ಶಕ ಆಡಳಿತ ನೀಡುತ್ತೇವೆ ಎನ್ನುತ್ತೀರಿ. ಅಧಿಕಾರಿಗಳು ತಪ್ಪು ಮಾಡಿದ್ದು ಗೊತ್ತಾಗಿ 6 ತಿಂಗಳು ಆಯಿತು. ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದರೆ ಏನ್ರಿ’ ಎಂದು ಕಾನೂನು ಸಚಿವರನ್ನು ತರಾಟೆಗೆ ತೆಗೆದು­ಕೊಂಡರು. ಆಗ ಪ್ರತಿಪಕ್ಷದ ಸದಸ್ಯರು ‘ಶೇಮ್ ಶೆಮ್’ ಎಂದು ಕೂಗಿದರು.

ಸಚಿವರ ಮೇಲಿನ ಸ್ಪೀಕರ್‌ ಸಿಟ್ಟು ನಂತರವೂ ಮುಂದು­ವರಿಯಿತು. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಮೇಲೂ ರೇಗಾಡಿದರು. ಕೆಲವು ಸಮಯದ ನಂತರ ‘ಎಲ್ರಿ ಸಚಿವರೆಲ್ಲಾ ಎಲ್ಲಿ ಹೋದರ್ರಿ’ ಎಂದು ಕಾನೂನು ಸಚಿವರನ್ನು ಪ್ರಶ್ನಿಸಿದರು.
ಜಗಳೂರು ಶಾಸಕ ಎಚ್.ಪಿ. ರಾಜೇಶ್ ಕುಡಿ­ಯುವ ನೀರಿನ ಯೋಜನೆ ಬಗ್ಗೆ ಪ್ರಶ್ನೆ ಮಾಡಿ­ದಾಗ ಮಾಯಕೊಂಡ ಶಾಸಕ ಶಿವಮೂರ್ತಿ ‘ಕುಡಿ­ಯುವ ನೀರು ಯೋಜನೆ ಜಾರಿಗೊಳಿಸಲು ಟೆಂಡರ್ ಕರೆದು 3 ವರ್ಷ ಆಗಿದೆ.  ಟೆಂಡರ್ ಅಂತಿಮ­ಗೊಳಿಸಲು 3 ವರ್ಷ ಬೇಕಾ?’ ಎಂದು ಸರ್ಕಾರ­ವನ್ನು ಕೆಣಕಿದರು. ಹೀಗೆ ಇಡೀ ದಿನ ಒಬ್ಬರಲ್ಲ ಒಬ್ಬರು ಆಡಳಿತ ಪಕ್ಷದ ಶಾಸಕರು ಅಸಮಾಧಾನ ಹೊರ ಹಾಕುವ ಕ್ರಿಯೆ ನಡೆದೇ ಇತ್ತು.

ಜೆಡಿಎಸ್– -ಬಿಜೆಪಿ ಜಟಾಪಟಿ
ಬುಧವಾರದ ವಿಶೇಷ ಎಂದರೆ ಜೆಡಿಎಸ್ ಶಾಸ­ಕಾಂಗ ಪಕ್ಷದ ನಾಯಕ ಎಚ್.ಡಿ.­ಕುಮಾರ­ಸ್ವಾಮಿ ಅವರಿಗೆ ಮಾತನಾಡಲು ಅವಕಾಶ ನೀಡ­ಬೇಕು ಎಂದು ಆ ಪಕ್ಷದ ಸದಸ್ಯರು ಧರಣಿ ನಡೆಸಿದ್ದು. ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಮುಗಿದ ನಂತರ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಸ್ತೂರಿರಂಗನ್ ವರದಿ ಬಗ್ಗೆ ನಿಲುವಳಿ ಮಂಡಿಸಲು ಮುಂದಾದರು.

ಇದಕ್ಕೆ ಆಕ್ಷೇಪ ವ್ಯಕ್ತ­ಪಡಿಸಿದ  ಜೆಡಿಎಸ್‌ನ ವೈ.ಎಸ್.ವಿ.ದತ್ತ ‘ಅಜೆಂಡಾ ಪ್ರಕಾರ ಕಬ್ಬು ಬೆಳೆಗಾರರ ಬಗ್ಗೆ ಮಾತ­­ನಾಡಲು ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು. ಇದನ್ನು ಬಿಜೆಪಿ ಸದಸ್ಯರು ಪ್ರತಿಭಟಿಸಿದರು. ‘ನಿಲು­ವಳಿ ಸೂಚನೆ ಮಂಡಿಸುವಾಗ ಪ್ರಾರಂಭಿಕ ಮಾತು­ಗಳಿಗೆ ಅವಕಾಶ ನೀಡಬೇಕು. ನಂತರ ವಿಧಾನ­ಸಭಾಧ್ಯಕ್ಷರು ರೂಲಿಂಗ್ ನೀಡುತ್ತಾರೆ. ಇದು ನಿಯಮ. ಸದನದ ನಿಯಮವನ್ನು ಮುರಿ­ಯಲು ಯಾರಿಗೂ ಹಕ್ಕು ಇಲ್ಲ’ ಎಂದು ವಾದಿಸಿದರು.

ಆಗ ಕೋಪಗೊಂಡ ಜೆಡಿಎಸ್ ಸದಸ್ಯರು ಸಭಾ­ಧ್ಯಕ್ಷರ ಪೀಠದ ಮುಂದೆ ಜಮಾಯಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಲು ಆರಂಭಿಸಿ­ದರು. ‘ಸದನ ಬಿಜೆಪಿ ಸ್ವತ್ತಲ್ಲ’ ಎಂದು ಕೂಗಿದರು. ದತ್ತ, ಚಲುವರಾಯಸ್ವಾಮಿ ಅವರು ಸಭಾ­ಧ್ಯಕ್ಷರ ಪೀಠದ ಬಳಿಗೇ ಬಂದು ‘ಕುಮಾರ­ಸ್ವಾಮಿಗೆ ಮಾತನಾಡಲು ಅವಕಾಶ ಕೊಡಿ’ ಎಂದು ಕೋರಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೋಲಾಹಲ ಉಂಟಾಗಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ. ಸದಸ್ಯರನ್ನು ಸಮಾಧಾನ ಪಡಿಸುವ ಕಾಗೋಡು ಅವರ ಯತ್ನ ಕೂಡ ಫಲ ನೀಡಲಿಲ್ಲ.
‘ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ. ಕಲಾಪಕ್ಕೆ ಅವಕಾಶ ನೀಡಿ’ ಎಂಬ ಅವರ ಮನವಿಗೆ ಸದಸ್ಯರು ಸೊಪ್ಪು ಹಾಕಲಿಲ್ಲ.

ಎಚ್‌ಡಿಕೆ ಔದಾರ್ಯ: ನಂತರ ಕುಮಾರಸ್ವಾಮಿ ಅವರೇ ಎದ್ದು ನಿಂತು, ‘ನಮಗೆ ಪ್ರಚಾರ ಬೇಕಾ­ಗಿಲ್ಲ. ನಾವೇ ಸೋಲುತ್ತೇವೆ. ನೀವು ಆರಂಭಿಕ ಮಾತುಗಳನ್ನು ಆಡಿ. ನಂತರವೇ ನಾನು ಮಾತ­ನಾಡು­ತ್ತೇನೆ’ ಎಂದು ಬಿಜೆಪಿ ಸದಸ್ಯರಿಗೆ ಹೇಳಿ­ದರು. ಆಗ ಜೆಡಿಎಸ್ ಸದಸ್ಯರು ಧರಣಿ ವಾಪಸು ಪಡೆದುಕೊಂಡರು.

ಆಗ ವಿಶ್ವೇಶ್ವರ ಹೆಗಡೆ ಮಾತನಾಡಲು ಆರಂಭಿಸಿ­ದಾಗ ಎದ್ದು ನಿಂತ ಚಲುವ­ರಾಯಸ್ವಾಮಿ ‘ಅಧಿಕೃತ ವಿರೋಧ ಪಕ್ಷವಾದ ಬಿಜೆಪಿಗೆ ಬೇರೆಯವರ ಮಾತು ಕೇಳುವ ಸಂಯಮ ಬೇಕು’ ಎಂದು ಬುದ್ಧಿಮಾತು ಹೇಳಿದರು.

Write A Comment