ಕರ್ನಾಟಕ

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ರಸ್ತೆ ಅಪಘಾತ : ಐವರ ಸಾವು, ಮೂವರು ಚಿಂತಾಜನಕ

Pinterest LinkedIn Tumblr

acid

ತುಮಕೂರು, ಡಿ.2: ಸರ್ವೀಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ತಿರುವು ಪಡೆಯುತ್ತಿದ್ದ ಟ್ರ್ಯಾಕ್ಟರ್‌ಗೆ ಅತಿವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4ರ ಕೋರಾ ಠಾಣೆ ವ್ಯಾಪ್ತಿಯ ನೆಲಹಾಳ್ ಬಳಿ ರಾತ್ರಿ 11 ಗಂಟೆ ಸುಮಾರಿನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಮೈಸೂರಿನ ಹರೀಶ್(35), ಬೆಂಗಳೂರಿನ ಪ್ರಮೋದ್ (33), ಹೊನ್ನಾವರದ ಅಶ್ವಿನ್ (32), ಕಾರವಾರದ ಮನೋಜ್ (35), ಮಧುಗಿರಿ ತಾಲ್ಲೂಕಿನ ಹಾವಿನಮಡಗು ಗ್ರಾಮದ ಚಿಕ್ಕಣ್ಣ (55) ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್‌ನಲ್ಲಿದ್ದ ತಿಪ್ಪನಹಳ್ಳಿಯ ಮುದ್ದೋಬಳಯ್ಯ, ಹಾವಿನಮಡಗು ಗ್ರಾಮದ ನಾಗಪ್ಪ ಮತ್ತು ಬಡವನಹಳ್ಳಿಯ ರಂಗಪ್ಪ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಿಂದ ನೀಲಗಿರಿ ಮರದ ತುಂಡುಗಳನ್ನು ತುಂಬಿಕೊಂಡು ಕೋರಾಗೆ ಬಂದ ಟ್ರ್ಯಾಕ್ಟರ್ ಅಲ್ಲಿ ಅನ್‌ಲೋಡ್ ಮಾಡಿದೆ. ಟ್ರ್ಯಾಕ್ಟರ್‌ನಲ್ಲಿ ಬಂದಿದ್ದ ನಾಲ್ವರು ಊಟ ಮಾಡಿ ಮದ್ಯ ಸೇವಿಸಿ 11 ಗಂಟೆ ಸುಮಾರಿನಲ್ಲಿ ವಾಪಸ್ ಊರಿಗೆ ಹೊರಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ನೆಲಹಾಳ್ ಬಳಿ ಸರ್ವೀಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ತಿರುವು ಪಡೆಯುವಾಗ ಶಿರಾ ಕಡೆಯಿಂದ ಅತಿವೇಗವಾಗಿ ಬಂದ ಸ್ಯಾಂಟ್ರೋ ಕಾರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್‌ನಲ್ಲಿದ್ದ ನಾಲ್ವರು ಸಿನಿಮೀಯ ರೀತಿಯಲ್ಲಿ ಮೇಲಕ್ಕೆ ಹಾರಿ ಸುಮಾರು 30ರಿಂದ 40 ಮೀಟರ್ ಅಂತರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಕಾರ್‌ನಲ್ಲಿದ್ದ ಅಶ್ವಿನ್ ಮತ್ತು ಮನೋಜ್ ಸ್ಥಳದಲ್ಲೇ ಮೃತಪಟ್ಟರೆ, ಹರೀಶ್ ಮತ್ತು ಪ್ರಮೋದ್ ಆಸ್ಪತ್ರೆ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಟ್ರ್ಯಾಕ್ಟರ್‌ನಲ್ಲಿದ್ದ ಚಿಕ್ಕಣ್ಣ ಚಿಕಿತ್ಸೆ ಫಲಿಸದೆ ಮುಂಜಾನೆ ಸಾವನ್ನಪ್ಪಿದ್ದಾನೆ.

ಗಾಯಗೊಂಡಿರುವ ಮುದ್ದೋಬಳಯ್ಯ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇನ್ನಿಬ್ಬರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಬೆಂಗಳೂರಿನ ಕ್ರಿಸ್ಟ್‌ಗ್ಲೋಬಲ್ ಇಂಡೋ ಸ್ಪೇಸ್ ಎಕೋ ಕಂಪೆನಿಯಲ್ಲಿ ಮೆಕ್ಯಾನಿಕ್ ಡಿಸೈನರ್‌ಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ನೇಹಿತ ವಿನಯ್‌ಡಂಬಾ ಅವರ ಮದುವೆ ಕೊಪ್ಪಳದಲ್ಲಿ ನಡೆದಿದ್ದು, ಸ್ನೇಹಿತರೆಲ್ಲರೂ ಮದುವೆಗೆ ಹೋಗಿದ್ದರು. ಕೊಪ್ಪಳದಲ್ಲಿ ನಿನ್ನೆ ಮಧ್ಯಾಹ್ನ ಮದುವೆ ಮುಗಿಸಿ ಸುತ್ತಲಿನ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿ ಸಂಜೆ ವೇಳೆಗೆ ಎರಡು ಬಸ್, 8 ಕಾರುಗಳಲ್ಲಿ ಸ್ನೇಹಿತರೆಲ್ಲಾ ಬೆಂಗಳೂರಿಗೆ ಹೊರಟಿದ್ದಾರೆ.

ಚಿತ್ರದುರ್ಗದಲ್ಲಿ ರಾತ್ರಿ ಎಲ್ಲರೂ ಊಟ ಮಾಡಿ ಪ್ರಯಾಣ ಮುಂದುವರೆಸಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ನೆಲಹಾಳ್ ಬಳಿ ಬಂದಾಗ ಒಂದು ಕಾರ್ ಅಪಘಾತಕ್ಕೀಡಾಗಿದೆ ಎಂದು ಪ್ರಭಾರಿ ಎಸ್‌ಪಿ ಲಕ್ಷ್ಮಣ್ ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ಗ್ರಾಮಸ್ಥರು, ನೆಲಹಾಳ್ ಉಪಠಾಣೆ ಸಿಬ್ಬಂದಿ, ಕೋರಾ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಪ್ರಭಾರ ಎಸ್‌ಪಿ ಲಕ್ಷ್ಮಣ್, ಶಿರ ಗ್ರಾಮಾಂತರ ಡಿವೈಎಸ್‌ಪಿ ರಮಾನಾಯಕ್, ಗ್ರಾಮಾಂತರ ಸಿಪಿಐ ರವಿ ಭೇಟಿ ನೀಡಿದ್ದಾರೆ. ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment