ಬೆಂಗಳೂರು: ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರಿಗೆ ಕೇವಲ ಪರಿಹಾರ ನೀಡಿ ಸರ್ಕಾರ ಸುಮ್ಮನಾಗುವುದಲ್ಲ. ಅದರ ಜತೆಗೆ ಅತ್ಯಾಚಾರ ಆರೋಪದಲ್ಲಿ ಸಿಲುಕಿಕೊಂಡವನು ಶಿಕ್ಷೆಯಿಂದ ಪಾರಾಗದಂತೆ ಗಮನಹರಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ರಾಜ್ಯದಲ್ಲಿ ಒಂದೇ ದಿನ ಹತ್ತು ಅತ್ಯಾಚಾರ ಪ್ರಕರಣಗಳು ನಡೆದ ಬಗ್ಗೆ ವರದಿಯಾಗಿತ್ತು. ವರದಿ ಆಧಾರದ ಮೇಲೆ ಮಹಿಳಾ ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿಎಚ್ ವಘೇಲ ಮತ್ತು ನ್ಯಾ.ಆರ್‌ಬಿ ಬೂದಿಹಾಳ್ ಅವರ ವಿಭಾಗೀಯ ಪೀಠ, ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಸರ್ಕಾರ ಯೋಜನೆ ರೂಪಿಸಿದೆ ಅಷ್ಟೆ. ಆದರೆ ಅತ್ಯಾಚಾರಕ್ಕೆ ಒಳಗಾದವರ ಮತ್ತು ಸಾಕ್ಷ್ಯಗಳ ರಕ್ಷಣೆ ಕುರಿತು ಸರ್ಕಾರ ಕ್ರಮ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಸರ್ಕಾರ ಅವರ ರಕ್ಷಣೆ ಕುರಿತು ಗಮನಹರಿಸಬೇಕು.
ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಬಹುತೇಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಖುಲಾಸೆಗೊಳ್ಳುತ್ತಾನೆ. ಇಲ್ಲವೇ ಸಂತ್ರಸ್ತ ಮಹಿಳೆಯರು ಹಣ ಪಡೆದು ಕೋರ್ಟ್‌ನಲ್ಲಿ ಪ್ರತಿಕೂಲ ಹೇಳಿಕೆ ನೀಡುತ್ತಿದ್ದಾರೆ ಎಂದು ಸರ್ಕಾರದ ಕಾರ್ಯಾ ವೈಖರಿಗೆ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ವಿಚಾರಣೆ ವೇಳೆ ಸರ್ಕಾರಿ ವಕೀಲರು, ಅತ್ಯಾಚಾರ ಸಂತ್ರಸ್ತರಿಗೆ ಒಂದೇ ಸೂರಿನಡಿ ಸರ್ಕಾರ ರೂಪಿಸಿರುವ ನಾನಾ ಯೋಜನೆಗಳ ಸೌಲಭ್ಯ ದೊರೆಯುವ ಕುರಿತು ಕಾರ್ಯ ನಿರ್ವಹಿಸುತ್ತಾರೆ ಎಂದು ಪೀಠದ ಗಮನಕ್ಕೆ ತಂದರು.