ಕರಾವಳಿ

ಕೋವಿಡ್ ಲಾಕ್ ಡೌನ್: ಶೌಚಾಲಯ, ಸ್ಮಶಾನದಲ್ಲಿ ವಾಸವಿದ್ದ ಕೇರಳದ ಯುವಕ ಮರಳಿ ಊರಿಗೆ!

Pinterest LinkedIn Tumblr

ಕುಂದಾಪುರ: ದೇಶದಲ್ಲಿ ಕೊರೊನಾ ವೈರಸ್‌ ನಿಯಂತ್ರಣದ ಬಗ್ಗೆ ಲಾಕ್‌ ಡೌನ್ ನಂತಹ ಬಿಗು ಕ್ರಮ ಕೈಗೊಳ್ಳುವ ಮೊದಲು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆಂದು ಬಂದು ಊರಿಗೆ ಮರಳಲಾಗದೆ ಅತಂತ್ರನಾಗಿ ಉಳಿದಿದ್ದ ಕೇರಳದ ಯುವಕನೊಬ್ಬನನ್ನು ಜಿಲ್ಲಾಡಳಿತ ಸಹಾಯದಿಂದ ಹುಟ್ಟೂರಿಗೆ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ.

ಕೇರಳದ ಕಣ್ಣೂರಿನ ಸಜಿತ್‌ (21) ಎನ್ನುವ ಯುವಕ ಲಾಕ್‌ ಡೌನ್‌ ಘೋಷಣೆಯಾಗುವ ಮೊದಲೇ ಕೊಲ್ಲೂರಿಗೆ ಆಗಮಿಸಿದ್ದ. ಮಲಯಾಳಂ ಹಾಗೂ ಇಂಗ್ಲಿಷ್‌ ಮಾತನಾಡುತ್ತಿದ್ದ ಈತ ಪ್ರತಿ ದಿನ ದೇವರ ದರ್ಶನಕ್ಕೆ ಆಗಮಿಸುತ್ತಿದ್ದ ಆತ ಮಧ್ಯಾಹ್ನದವರೆಗೂ ದೇಗುಲದಲ್ಲಿ ಜಪ, ಪ್ರದಕ್ಷಿಣಿ ಮಾಡಿ ಪ್ರಸಾದ ಸ್ವೀಕರಿಸಿ ತೆರಳುತ್ತಿದ್ದ . ಲಾಕ್‌ ಡೌನ್‌ ಘೋಷಣೆಯ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆಂದು ಬಂದಿದ್ದವರು ಹಿಂತಿರುಗಿದ್ದರೂ, ಈತ ಮಾತ್ರ ಕೇರಕ್ಕೆ ವಾಪಾಸ್ಸಾಗಿರಲಿಲ್ಲ.

ದೇವಸ್ಥಾನದಲ್ಲಿ ಪ್ರಸಾದದೂಟ ಸಿಗುವವರೆಗೂ ಅದಕ್ಕೆ ಅವಲಂಭಿತನಾಗಿದ್ದ ಆತನಿಗೆ ನಂತರ ಕೊಲ್ಲೂರಿನ ಸ್ಥಳೀಯರು ನೆರವಾಗಿದ್ದರು. ದೇವಸ್ಥಾನದ ವಸತಿ ಗ್ರಹಗಳು ಮುಚ್ಚಿದ್ದರಿಂದಾಗಿ ಸೌಪರ್ಣಿಕ ನದಿ ತಟದಲ್ಲಿನ ಶೌಚಾಲಯ ಹಾಗೂ ಸ್ಮಶಾನಗಳಲ್ಲಿ ವಾಸ್ತವ್ಯ ಹೂಡಿದ್ದ. ಕೊರೊನಾ ಕಾಣಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಮಾತನಾಡಿಸಿದ್ದ ಸ್ಥಳೀಯರು, ಪೊಲೀಸರು ಹಾಗೂ ಇಲ್ಲಿನ ಆಶ್ರಮವೊಂದರಲ್ಲಿ ಇದ್ದ ಕೇರಳ ಮೂಲದ ಮಲಯಾಳಂ ಭಾಷಿಕರು, ಊರಿಗೆ ಹೋಗುವಂತೆ ತಿಳಿಸಿದ್ದರೂ,ಆತ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಲಾಕ್‌ ಡೌನ್‌ ಅವಧಿ ವಿಸ್ತರಣೆಯಾಗುತ್ತಿದ್ದಂತೆ ಊರಿಗೆ ಹೋಗುವ ಹಂಬಲಕ್ಕೆ ಬಂದಿದ್ದ ಆತ, ಇದಕ್ಕಾಗಿ ಕೇರಳದ ಹೆಲ್ಪ್‌ ಲೈನ್‌ ಸಂಪರ್ಕಿಸಿ ಸಹಾಯ ಕೋರಿದ್ದ ಎನ್ನಲಾಗಿದೆ. ಈ ವೇಳೆ ನೆರವಿಗೆ ಬಂದಿದ್ದ ಕಣ್ಣೂರು ಕ್ಷೇತ್ರದ ಸಂಸದ ಕೆ.ಸುಧಾಕರನ್‌, ಮಂಗಳೂರಿನ ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ಅವರನ್ನು ಸಂಪರ್ಕಿಸಿ ಆತನಿಗೆ ನೆರವಾಗುವಂತೆ ಕೋರಿದ್ದರು. ಅವರು ನೀಡಿದ್ದ ಮಾಹಿತಿಯ ಅಧಾರದಲ್ಲಿ ಉಡುಪಿ ಜಿಲ್ಲಾಡಳಿತವನ್ನು ಸಂಪರ್ಕಿಸಿ ಯುವಕನಿಗೆ ಇರುವ ಮಾನಸಿಕ ಖಿನ್ನತೆಯನ್ನು ವಿವರಿಸಿ ಫ್ಯಾಕ್ಸ್‌ ಮಾಡಿ ಸಹಕಾರಕ್ಕೆ ಮನವಿ ಮಾಡಿದ್ದರು.

ಫ್ಯಾಕ್ಸ್‌ ಸಂದೇಶಕ್ಕೆ ಸ್ಪಂದಿಸಿದ್ದ ಜಿಲ್ಲಾಡಳಿತ ಕೊಲ್ಲೂರು ಪೊಲೀಸರ ನೆರವಿನಿಂದ ಯುವಕನನ್ನು ಪತ್ತೆ ಹಚ್ಚಿ ಎಎಸ್‌ಐ ಜನಾರ್ದನ್‌ ಅವರ ನೆರವಿನಿಂದ ಆತನನ್ನು ಹೆಜಮಾಡಿಯ ಉಡುಪಿ ಜಿಲ್ಲಾ ಗಡಿಗೆ ಕರೆ ತರಲಾಗಿತ್ತು. ಅಲ್ಲಿಂದ ಮಿಥುನ್‌ ರೈ ಕಳುಹಿಸಿದ ಅಂಬ್ಯುಲೆನ್ಸ್‌ನಲ್ಲಿ ರಾಜ್ಯದ ಗಡಿ ಭಾಗವಾದ ತಲಪಾಡಿಯವರೆಗೂ ಯುವಕನನ್ನು ಕಳುಹಿಸಲಾಗಿತ್ತು. ಅಲ್ಲಿಂದ ಸಂಸದ ಸುಧಾಕರನ್‌ ಅವರು ವ್ಯವಸ್ಥೆ ಮಾಡಿದ್ದ ವಾಹನದಲ್ಲಿ ಊರು ತಲುಪಿದ್ದಾನೆ.

ಕಣ್ಣೂರಿನ ಸಂಸದ ಕೆ.ಸುಧಾಕರನ್‌ ನನ್ನನ್ನು ದೂರವಾಣಿ ಸಂಪರ್ಕಿಸಿ ಆತನಿಗೆ ನೆರವಾಗುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿಯ ಎಸ್‌.ಪಿ ಹಾಗೂ ಮಂಗಳೂರಿನ ಕಮಿಷನರ್‌ ಅವರನ್ನು ಸಂಪರ್ಕಿಸಿ ತುರ್ತು ಸಹಕಾರಕ್ಕೆ ಮನವಿ ಮಾಡಿದ್ದೆ. ಉಡುಪಿ ಹಾಗೂ ಮಂಗಳೂರು ಜಿಲ್ಲಾಡಳಿತ ನೆರವಿನಿಂದ ಆತನನ್ನು ಕೇರಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
– ಮಿಥುನ್‌ ರೈ, ಯುವ ಕಾಂಗ್ರೆಸ್‌ ಮುಖಂಡ ಮಂಗಳೂರು.

Comments are closed.