ಕರಾವಳಿ

ರಾಜ್ಯಕ್ಕೆ ಒಂದೇ ತುರ್ತು ಸಹಾಯವಾಣಿ ನಂಬರ್-‘112’: ಮೂರೇ ದಿನಕ್ಕೆ 12 ಲಕ್ಷಕ್ಕೂ ಅಧಿಕ ಕರೆಗಳು!

Pinterest LinkedIn Tumblr

ವಿಶೇಷ ವರದಿ- ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಸ್ಪಂದಿಸಲು, ತುರ್ತು ಸೇವೆಗಳಾದ ಪೊಲೀಸ್ ಸಹಾಯವಾಣಿ (100), ಅಗ್ನಿಶಾಮಕ (101), ಆಂಬುಲೆನ್ಸ್ (108)ಗಳಿಗೆ ಕರೆ ಮಾಡಲು ಒಂದೇ ತುರ್ತು ಕರೆ ಸಂಖ್ಯೆಯನ್ನು ಒಂದು ದೇಶ, ಒಂದೇ ತುರ್ತು ಕರೆ ಸಂಖ್ಯೆ – 112 ಎಂಬ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗಿದ್ದು, ಸಾರ್ವಜಿನಿಕ ಸೇವೆಗೆ ದಿನಾಂಕ 31-10-2019ರಂದು ಲೋಕಾರ್ಪಣೆಗೊಂಡಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ವಿವಿಧ ಜಿಲ್ಲೆಗಳ ಪೊಲೀಸ್ ಇಲಾಖಾ ವತಿಯಿಂದ ಕೋರಲಾಗಿದೆ.

ಯಾವೆಲ್ಲಾ ಸೇವೆ ಸಿಗುತ್ತೆ…
ಪೊಲೀಸ್ ಸಹಾಯವಾಣಿ (100), ಅಗ್ನಿಶಾಮಕ (101), ಆಂಬುಲೆನ್ಸ್ (108), ಹಾಗೂ ಇತರ ತುರ್ತು ಸೇವೆಗಳನ್ನು ‘112’ ತುರ್ತು ಕರೆ ಸಂಖ್ಯೆಯ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಲು, ರೂಪುಗೊಂಡಿರುವ ತುರ್ತು ಸ್ಪಂದನ ಸಹಾಯ ಕೇಂದ್ರ (Emergency Response Support System) ಇದಾಗಿದ್ದು, ಇನ್ನು ಮುಂದೆ ಅಪರಾಧ ಪ್ರಕರಣಗಳು ಹಾಗೂ ತುರ್ತು ಸಂದರ್ಭಗಳಲ್ಲಿ 112 ದೂರವಾಣಿ ನಂಬರಿಗೆ ಕರೆ ಮಾಡಿ ಪೊಲೀಸ್ ನೆರವು ಪಡೆಯಬಹುದಾಗಿದೆ ಹಾಗೂ ಸಾರ್ವಜನಿಕರಿಗೆ ಸ್ಪಂದಿಸಲು ಪೊಲೀಸ್ ಇಲಾಖೆ ವತಿಯಿಂದ ತುರ್ತು ಸ್ಪಂದನ ವಾಹನಗಳನ್ನು ನಿಯೋಜಿಸಲಾಗಿದೆ.

ಕಾರ್ಯವ್ಯಾಪ್ತಿ ಹೇಗೆ?
ಯಾವುದೇ ನಾಗರಿಕರು 112ಗೆ ಕರೆ ಮಾಡಿದಾಗ, ಆ ಕರೆಯು ನೇರವಾಗಿ ರಾಜ್ಯ ERSS ಕೇಂದ್ರಸ್ಥಾನದಲ್ಲಿ ಸ್ವೀಕೃತಗೊಂಡು, ಕರೆ ಬಂದ ಸ್ಥಳ, ವಿಳಾಸಕ್ಕನುಗುಣವಾಗಿ,ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಕಚೇರಿಯ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿರುವ, ಜಿಲ್ಲಾಮಟ್ಟದ ತುರ್ತು ಸ್ಪಂದನ ಸಹಾಯ ನಿಯಂತ್ರಣ ಕೇಂದ್ರಕ್ಕೆ (DCC) ಮಾಹಿತಿಯನ್ನು ರವಾನಿಸಲಾಗುವುದು. ಜಿಲ್ಲಾಮಟ್ಟದ ನಿಯಂತ್ರಣ ಕೇಂದ್ರದಲ್ಲಿ ಕರೆಯ ಮಾಹಿತಿಯ ಸ್ಥಳವು ಯಾವ ಠಾಣಾ ವ್ಯಾಪ್ತಿಗೆ ಒಳಪಡುವುದೋ ಅಲ್ಲಿನ Emergency Response Vehicle (ERV)ಗೆ ಮಾಹಿತಿ ನೀಡಲಾಗುತ್ತದೆ. ಮಾಹಿತಿಯು Emergency Response Vehicleಗಳಲ್ಲಿ ಅಳವಡಿಸಿರುವ MDTಯಲ್ಲಿ ಸ್ವೀಕೃತಗೊಂಡು, ವಾಹನದಲ್ಲಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರು ತುರ್ತಾಗಿ ಸ್ಪಂದಿಸಿ ಘಟನೆಯ ಸ್ಥಳಗಳಿಗೆ ಧಾವಿಸುತ್ತಾರೆ. ಘಟನೆಯ ವಿವರ ಹಾಗೂ ತೆಗೆದುಕೊಂಡ ಕ್ರಮದ ಬಗ್ಗೆ ವಾಹನದಲ್ಲಿ ಅಳವಡಿಸಿದ MDT ಮೂಲಕ ಜಿಲ್ಲಾಮಟ್ಟದ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡುತ್ತಾರೆ.

ಇದುವರೆಗೆ ರಾಜ್ಯ ERSS ಕೇಂದ್ರಸ್ಥಾನದಲ್ಲಿ ಸುಮಾರು 12 ಲಕ್ಷ ಕರೆಗಳು ಸ್ವೀಕೃತಗೊಂಡಿರುತ್ತದೆ.

Comments are closed.