ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ನೀಡಿ ಭತ್ತ ಖರೀದಿ ಕೇಂದ್ರ: ಡಿಸಿ ಜಗದೀಶ್

Pinterest LinkedIn Tumblr

ಉಡುಪಿ: ಭತ್ತದ ಬೆಳೆಗೆ ಕೇಂದ್ರ ಸರ್ಕಾರ ಘೋಷಿಸಿರುವ 2019-20 ನೇ ಸಾಲಿನ ಬೆಂಬಲ ಬೆಲೆ ಅಡಿಯಲ್ಲಿ , ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದ್ದಾರೆ.
ಅವರು ಶನಿವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಟಾಸ್ಕ್ ಫೊರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ಆಗಿರುವ ಕಾರಣ ಭತ್ತದ ಫಸಲು ಉತ್ತಮವಾಗಿದ್ದು, ಜಿಲ್ಲೆಯ 34730 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆದಿದ್ದು, ಮಾರುಕಟ್ಟಯಲ್ಲಿ ಪ್ರಸ್ತುತ ಭತ್ತದ ಬೆಲೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಿದ್ದು, ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ , ಕೇಂದ್ರ ಸರ್ಕಾರ ಘೋಷಿಸಿರುವ ಭತ್ತದ ಬೆಂಬಲ ಬೆಲೆ , ಸಾಮಾನ್ಯ ವರ್ಗಕ್ಕೆ ರೂ.1815.00 ಮತ್ತು ಗ್ರೇಡ್ 1 ಭತ್ತಕ್ಕೆ ರೂ.1835.00 ರ ದರದಲ್ಲಿ ರೈತರಿಂದ ಭತ್ತ ಖರೀದಿಸಲು, ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತು ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ, ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಭತ್ತ ಖರೀದಿ ಕೇಂದ್ರದಲ್ಲಿ ಖರೀದಿಸಿದ ಭತ್ತವನ್ನು ಶೇಖರಿಸಲು, ಉಡುಪಿ, ಕುಂದಾಪುರ , ಕಾರ್ಕಳದಲ್ಲಿ ಅಗತ್ಯವಿರುವ ಗೋಡೌನ್ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ ಡಿಸಿ, ಭತ್ತದ ಗುಣಮಟ್ಟ ಪರೀಕ್ಷಿಸಲು ಗ್ರೇಡರ್ ಗಳ ನೇಮಕ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ನಾಯಕ್, ಎಪಿಎಂಸಿ ಕಾರ್ಯದರ್ಶಿ ಶಿವಾನಂದ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.