ಕರಾವಳಿ

ಮಂಗಳೂರು ವಿವಿ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮಾಲಿನ್ಯದ ಬಗ್ಗೆ ಜನಜಾಗೃತಿ ಆಂದೋಲನ

Pinterest LinkedIn Tumblr

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು (ಗ್ರಾಮ ದತ್ತು ಸ್ವೀಕಾರ-‘ಮ೦ಗಳ ಯೋಜನೆ’) ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ, ಉನ್ನತ ಶಿಕ್ಷಣ ಇಲಾಖೆ ಆಶ್ರಯದಲ್ಲಿ ‘ಸ್ವಚ್ಛತಾ ಪಖ್ವಾಡ’ ಕಾರ್ಯಕ್ರಮದ ಅಂಗವಾಗಿ ಕೊಣಾಜೆ ಹಾಗೂ ಫಜೀರು ಗ್ರಾಮಗಳ ವ್ಯಾಪ್ತಿಯಲ್ಲಿ ‘ಪ್ಲಾಸ್ಟಿಕ್ ತ್ಯಾಜ್ಯ ಮಾಲಿನ್ಯದ ಬಗ್ಗೆ ಜನಜಾಗೃತಿ’ ಅಭಿಯಾನ ಇತ್ತೀಚಿಗೆ ಜರಗಿತು.

ಪ್ರೊ. ಎ. ಎಂ. ಖಾನ್, ಕುಲಸಚಿವರು ಮಂಗಳೂರು ವಿಶ್ವವಿದ್ಯಾನಿಲಯ ಇವರು ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಕರಪತ್ರವನ್ನು ಬಿಡುಗಡೆ ಮಾಡಿ ಮಾತಾನಾಡಿದರು.

ಕ್ಯಾನ್ಸರ್ ಸೇರಿ ಅನೇಕ ಮಾರಾಣಾಂತಿಕ ಆರೋಗ್ಯ ಸಮಸ್ಯೆ, ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಹರಡುವ ಸೊಳ್ಳೆಗಳ ವಂಶಾಭಿವೃದ್ಧಿಗೆ ಕಾರಣವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ನಮ್ಮ ಪರಿಸರವನ್ನು ಸಂರಕ್ಷಣೆ ಮಾಡುವ ಅನಿವಾರ್ಯ ಪರಿಸ್ಥಿತಿ ನಮ್ಮ ಮುಂದಿದೆ ಎಂದು ಹೇಳಿದರು.

ಶ್ರೀ ನಜ಼ರ್ ಷಾ ಪಟ್ಟೋರಿ, ಅಧ್ಯಕ್ಷರು, ಕೊಣಾಜೆ ಗ್ರಾಮ ಪಂಚಾಯತ್, ಇವರು ಪರಿಸರ ಸ್ನೇಹಿ ಕೈಚೀಲಗಳನ್ನು ಹಸ್ತಾಂತರಿಸಿ ಮಾತಾನಾಡಿ, 1947ಕ್ಕಿಂತಲೂ ಮೊದಲು ನಮ್ಮ ಹಿರಿಯರು ಬ್ರಿಟೀಷರ ವಿರುದ್ಧ ನಿರಂತರವಾಗಿ ಹೋರಾಡಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು. ಆಧುನಿಕ ಯುಗದ ಮಾಹಮಾರಿ ಆಗಿರುವ ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ನಾವೆಲ್ಲರೂ ಹೋರಾಡಿ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಬೇಕಾಗಿದೆ ಎಂದರು.

ಜೀವವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ. ಪ್ರಶಾಂತ ನಾಯ್ಕ ಅವರು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತಾನಾಡಿ, ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ಇಂಗಾಲದ ಡೈ‌ಆಕ್ಸೈಡ್ ಪ್ರಮಾಣ 2050 ರ ವೇಳೆಗೆ ವಾರ್ಷಿಕ 2.75 ಶತಕೋಟಿ ಟನ್‌ಗಳಷ್ಟು ಏರಿಕೆ ಆಗುತ್ತದೆ ಎಂದು ವೈಜ್ಞಾನಿಕ ಸಮೀಕ್ಷೆ ಹೇಳುತ್ತದೆ. ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ ತಾಪಾಮಾನ ಏರಿಕೆ ಮತ್ತು ಹವಾಗುಣ ಬದಲಾವಣೆಗೂ ಕೂಡ ಕಾರಣವಾಗಿ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ ಇಂತಹ ನೈಸರ್ಗಿಕ ವಿಪತ್ತುಗಳಿಗೂ ಎಡೆಮಾಡಿ ಕೊಡುತ್ತದೆ. ಆದುದರಿಂದ ಪ್ಲಾಸ್ಟಿಕ್‌ತ್ಯಾಜ್ಯ ಮುಕ್ತ ಸಮಾಜವನ್ನು ಕಟ್ಟುವಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.

ಕಾರ್ಯಕ್ರಮದ ಸಂಯೋಜಕರಾದ ಡಾ. ತಾರಾವತಿ ಎನ್.ಸಿ. ಅವರು ವಂದನಾರ್ಪಣೆ ಸಲ್ಲಿಸುತ್ತಾ, ‘ನಾವು ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಏನೂ ತಪ್ಪು ಮಾಡದ ವನ್ಯಜೀವಿಗಳೂ ಕೂಡ ಅಪಾಯದಲ್ಲಿವೆ’ ಎಂದು ಹೇಳಿದರು.

ವಿಶ್ವವಿದ್ಯಾನಿಲಯದ ಇಂಡೋರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಇಲ್ಲಿಂದ ಕೊಣಾಜೆ ಗ್ರಾಮ ಪಂಚಾಯತ್ ಮಾರ್ಗವಾಗಿ ಜಾತಾ ಹೊರಟಿತು. ಜೀವವಿಜ್ಞಾನ, ಪರಿಸರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು, ವಿಶ್ವವಿದ್ಯಾನಿಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಕೊಣಾಜೆ ಹಾಗೂ ಫಜೀರು ಮುಖ್ಯ ರಸ್ತೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಘೋಷಣೆಗಳನ್ನು ಕೂಗುತ್ತ, ಜಾತಾವನ್ನು ನಡೆಸಿ ಸಾರ್ವಜನಿಕರಿಗೆ ಕರಪತ್ರ ಹಾಗೂ ಪರಿಸರ-ಸ್ನೇಹಿ ಕೈಚೀಲಗಳನ್ನು ವಿತರಣೆ ಮಾಡಿದರು.

ನರಸಿಂಹಯ್ಯ ಎನ್., ಡಾ. ಶರತ್ ಚಂದ್ರ ಕೆ., ಶ್ರೀಮತಿ ಲವೀನ ಕೆ.ಬಿ.  ದಿವಾಕರ್ ಎಮ್.ಎಸ್. ಚನಿಯಪ್ಪ ಬಿ. ಇವರುಗಳು ಜಾತಾವನ್ನು ಮುನ್ನೆಡೆಸಿದರು.

ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರಿಮತಿ ಮುತ್ತು ಎನ್. ಶೆಟ್ಟಿ,  ಅಚ್ಚುತ ಗಟ್ಟಿ,  ಎ. ರವೀಂದ್ರ,  ಹರೀಶ್ಚಂದ್ರ ಶೆಟ್ಟಿಗಾರ್, ಶ್ರೀಮತಿ ವೇದಾವತಿ ಗಟ್ಟಿ,  ಮಹಮದ್ ಇಕ್ಬಾಲ್, ಜೇಸಿ ಮಂಗಳಗಂಗೋತ್ರಿ ಸ್ಥಾಪಕ ಅಧ್ಯಕ್ಷ  ತ್ಯಾಗಂ ಹರೇಕಳ, ಸಪ್ತಸ್ವರ ಕಲತಂಡ ಸದಸ್ಯ  ವೆಂಕಟೇಶ್ ಎಮ್. ಉಪಸ್ಥಿತರಿದ್ದರು.

Comments are closed.