ಕರಾವಳಿ

ಗಿರಿಗಿಟ್’ ತಡೆಯಾಜ್ಞೆ ವಿವಾದ ಸುಖಾಂತ್ಯ : ದಾವೆ ಹಿಂಪಡೆಯಲು ವಕೀಲರ ಸಂಘ ನಿರ್ಧಾರ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.18 : ಗಿರಿಗಿಟ್’ ತುಳು ಸಿನೆಮಾದ ವಿರುದ್ಧ ಮಂಗಳೂರು ವಕೀಲರ ಸಂಘ ಮಂಗಳೂರಿನ ನ್ಯಾಯಾಲಯದಲ್ಲಿ ಹೂಡಿರುವ ದಾವೆ ಹಿಂಪಡೆಯಲು ನಿರ್ಧರಿಸಿದ್ದು, ಈ ಮೂಲಕ ಗಿರಿಗಿಟ್ ಸಿನೆಮಾಕ್ಕೆ ಕೋರ್ಟ್ ನೀಡಿರುವ ತಡೆಯಾಜ್ಞೆ ವಿವಾದ ಬಗೆಹರಿದಿದೆ ಎಂದು ಮಂಗಳೂರು ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ. ಮತ್ತು ಗಿರಿಗಿಟ್ ಸಿನೆಮಾ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಘವೇಂದ್ರ ಅವರು, ‘ಗಿರಿಗಿಟ್’ ತುಳು ಸಿನೆಮಾದಲ್ಲಿ ವಕೀಲರು ಮತ್ತು ನ್ಯಾಯಾಂಗ ಬಗ್ಗೆ ತಪ್ಪು ಮಾಹಿತಿ ನೀಡುವ ದೃಶ್ಯಗಳಿವೆ ಎಂದು ಆರೋಪಿಸಿ ವಕೀಲರ ಸಂಘ ಮಂಗಳೂರಿನ ನ್ಯಾಯಾಲಯದಲ್ಲಿ ಹೂಡಿರುವ ದಾವೆ ಹಿಂಪಡೆಯಲು ನಿರ್ಧರಿಸಿದೆ. ಕಾನೂನಿನ ಅರಿವಿನ ಕೊರತೆಯಿಂದ ಚಿತ್ರದಲ್ಲಿ ತಪ್ಪಾಗಿದೆ ಎಂದು ಗಿರಿಗಿಟ್ ಚಿತ್ರತಂಡ ಕ್ಷಮೆ ಯಾಚಿಸಿದೆ. ಆಕ್ಷೇಪಾರ್ಹವಾದ ಸಂಭಾಷಣೆ ಮ್ಯೂಟ್ ಮಾಡಲು, ದೃಶ್ಯಗಳನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿಕೊಂಡಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಅಫಿದವಿತ್ ಸಲ್ಲಿಸಲಾಗಿದೆ ಎಂದರು.

ಈ ಪ್ರಮಾಣಪತ್ರದ ಅನ್ವಯ ನಿಗದಿತ ಕಾಲಾವಕಾಶದ ಒಳಗೆ ಚಿತ್ರತಂಡ ಷರತ್ತುಗಳನ್ನು ಪೂರೈಸಿದ ಬಳಿಕ ವಕೀಲರ ಸಂಘ ದಾವೆ ಹಿಂಪಡೆಯಲಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.

‘ಗಿರಿಗಿಟ್’ ಚಿತ್ರದ ನಿರ್ದೇಶಕ ರೂಪೇಶ್ ಶೆಟ್ಟಿ ಅವರು ಮಾತನಾಡಿ, ಚಿತ್ರದ ದೃಶ್ಯಗಳನ್ನು ತೆಗೆದುಹಾಕಲು ಸೆನ್ಸಾರ್ ಮಂಡಳಿ ಅನುಮತಿ ಪಡೆಯಬೇಕಿದೆ. ಇದು ದೀರ್ಘಾವಧಿ ಪ್ರಕ್ರಿಯೆ. ಮುಂದಿನ ಮೂರು ದಿನಗಳೊಳಗೆ ಆಕ್ಷೇಪಾರ್ಹ ಎಂದು ಆರೋಪಿಸಲಾದ ಸಂಭಾಷಣೆಗಳನ್ನು ಮ್ಯೂಟ್ ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ವಕೀಲರ ಸಂಘಕ್ಕೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು. ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಕೀಲರ ಬಗ್ಗೆ ಯಾರೂ ಕೀಳಾಗಿ ಪೋಸ್ಟ್ ಮಾಡಬಾರದು ಎಂದು ರೂಪೇಶ್ ಶೆಟ್ಟಿ ಮನವಿ ಮಾಡಿದರು.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ವಕೀಲ ಎಂ.ಪಿ. ಶೆಣೈ, ಗಿರಿಗಿಟ್ ಚಿತ್ರತಂಡದ ನಿರ್ಮಾಪಕ ಮಂಜುನಾಥ ಅತ್ತಾವರ್, ನೃತ್ಯ ನಿರ್ದೇಶಕ ನವೀನ್ ಶೆಟ್ಟಿ ಉಪಸ್ಥಿತರಿದ್ದರು.

Comments are closed.