ಕರಾವಳಿ

ಉಡುಪಿಯ ವಿವಿದೆಡೆಯಲ್ಲಿ ದಾಳಿ: ಗಾಂಜಾ ಮಾರಾಟಗಾರರ ಸೆರೆ!

Pinterest LinkedIn Tumblr

ಉಡುಪಿ: ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಜಿಲ್ಲೆಯ ವಿವಿಧೆಡೆಯಿಂದ ಹಲವರನ್ನು ಗಾಂಜಾ ಸಮೇತ ಬಂಧಿಸಲಾಗಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಣಿಪಾಲದಲ್ಲಿ….
ಮಣಿಪಾಲದ ಶೀಂಬ್ರ ಬಸ್‌ ನಿಲ್ದಾಣ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ 80 ಬಡಗಬೆಟ್ಟಿನ ರಾಘವೇಂದ್ರ ನಾಯಕ್‌(23)ನನ್ನು ಉಡುಪಿ ಡಿಸಿಐಬಿ ಇನ್‌ಸ್ಪೆಕ್ಟರ್‌ ಕಿರಣ್‌ ಸಿ. ನೇತೃತ್ವದ ಪೊಲೀಸರ ತಂಡ ಜು.5ರಂದು ಬಂಧಿಸಿದೆ. ಈತನಿಂದ 240 ಗ್ರಾಂ ಗಾಂಜಾ, ಮೊಬೈಲ್‌ ಫೋನ್‌ ಹಾಗೂ ಕೈಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲದ ಈಶ್ವರನಗರ ನಿಲ್ದಾಣದ ಬಳಿ ಗಾಂಜಾ ಸೇವಿಸಿ ಕುಳಿತಿದ್ದ ಮೂಲತಃ ಕೊಪ್ಪ ತಾಲೂಕಿನ ಅಕ್ಷಯ್‌ ಸಿ.ಎನ್‌. (20) ಎಂಬಾತನನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಕಡೆಕಾರು ಗ್ರಾಮದ ಕನ್ನರ್ಪಾಡಿ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕುಂದಾಪುರ ಕಟ್‌ಬೆಲ್ತೂರಿನ ಪುನೀತ್‌ ಕುಮಾರ್‌ನನ್ನು ಉಡುಪಿ ಡಿಸಿಐಬಿ ಸಿಐ ಸಿ. ಕಿರಣ್‌ ಅವರು ಶುಕ್ರವಾರ ಸಂಜೆ ದಾಳಿ ನಡೆಸಿ ಬಂಧಿಸಿದ್ದಾರೆ. ಆತನಿಂದ 305 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಾವರದ ಚೆಂಬುಕಲ್ಲು ಬಳಿ ಶನಿವಾರ ಬೆಳಗ್ಗೆ ತೀರ್ಥಹಳ್ಳಿಯ ನಿವಾಸಿ ಮಹಮ್ಮದ್‌ ಸೋಯಿಬ್‌ (29) ಮತ್ತು ಮಲ್ಪೆ ನಿವಾಸಿ ಸರ್ದಾರ್‌ ವಾಹೀದ್‌ (35) ಅವರನ್ನು ಮಾರುತಿ ಸ್ವಿಫ್ಟ್ ಕಾರು ಹಾಗೂ 450 ಗ್ರಾಂ ಗಾಂಜಾದೊಂದಿಗೆ ಬಂಧಿಸಲಾಗಿದೆ. ಅವರು ಗಾಂಜಾ ಮಾರಾಟಕ್ಕೆ ಹೊಂಚು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವನೆ ಮಾಡಿರುವ ಮೂವರನ್ನು ಜು. 6ರಂದು ಉಡುಪಿ ಸೆನ್‌ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜು. 6ರಂದು ಮಧ್ಯಾಹ್ನ 12.30ರ ವೇಳೆಗೆ ಹೆರ್ಗ ಗ್ರಾಮದ ಅಂಗಡಿ ಎದುರು ಗಾಂಜಾ ಸೇವಿಸಿದ್ದ ಉಡುಪಿ ಮಿಷನ್‌ ಕಾಂಪೌಂಡ್‌ ನಿವಾಸಿ ಮಹಮ್ಮದ್‌ ಅನಾಸ್‌ ಅಶ್ರಫ್ (20) ಎಂಬಾತನನ್ನು ಬಂಧಿಸಲಾಗಿದೆ. ಇದೇ ದಿನ ಮಧ್ಯಾಹ್ನ 12.15ಕ್ಕೆ ಹೆರ್ಗ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ್ದ ಕೆಮ್ಮಣ್ಣಿನ ತಾಹಿರ್‌ ಆಸೀಫ್ (28) ಮತ್ತು ಶಿರ್ವದ ಅಬ್ದುಲ್‌ ಖಾದೀರ್‌(28)ನನ್ನು ಬಂಧಿಸಲಾಗಿದೆ.

Comments are closed.