ಕರಾವಳಿ

ಹಾಲು ಶ್ರೇಷ್ಠವಾದದ್ದು ಆದರೆ ಯಾವ ಹಾಲು..? ಹಸುವಿನ ಹಾಲು V/S ಆಡಿನ ಹಾಲು

Pinterest LinkedIn Tumblr

ಹಸುವಿನ ಹಾಲು ಅಮೃತ ಎಂಬ ನಂಬಿಕೆಯಿದೆ. ಆದರೆ ಆಯುರ್ವೇದ ಗ್ರಂಥಗಳು ಹಸುವಿನ ಹಾಲು ಅಮೃತ, ಅದರ ಕರುವಿಗೆ ಹೊರತು ಮನುಷ್ಯರಿಗಲ್ಲ ಎನ್ನುತ್ತವೆ. ವೈದ್ಯ ವಿಜ್ಞಾನ ಹಸುವಿನ ಹಾಲಿಗಿಂತ ಆಡಿನ ಹಾಲು ಬಲು ಶ್ರೇಷ್ಠವಾದದ್ದು ಎಂದು ಹೇಳಿದೆ. ಮಹಾತ್ಮ ಗಾಂಧಿ ಅವರು ಕೂಡ ಅದನ್ನೇ ಬಳಸುತ್ತಿದ್ದರು. ಹಸುವಿನ ಹಾಲು ಅನೇಕರ ಪಾಲಿಗೆ ಒಗ್ಗದ ಆಹಾರವಾಗುತ್ತದೆ. ಕಾರಣ ಅದರಲ್ಲಿರುವ ಸಕ್ಕರೆಯ ಲ್ಯಾಕ್ಟೋಸ್ ಅಂಶ ಜೀರ್ಣವಾಗುವುದಿಲ್ಲ. ಆದರೆ ಆಡಿನ ಹಾಲಿನ ಲ್ಯಾಕ್ಟೋಸ್ ಬಹು ಸುಲಭವಾಗಿ ಜೀರ್ಣವಾಗುತ್ತದೆ.

ವಿಶ್ವದ ಹಾಲು ಬಳಕೆದಾರರಲ್ಲಿ ಶೇ. 65 ಮಂದಿ ಆಡಿನ ಹಾಲು ಕುಡಿಯುತ್ತಾರೆಂಬುದು ಸೋಜಿಗದ ವಿಷಯ. ಹೆಚ್ಚು ಬೇಗನೆ ಜೀರ್ಣವಾಗಿ ದೇಹ ಸುಲಭವಾಗಿ ಬಳಸುವ ಆರೋಗ್ಯಕರವಾದ ಕೆಫಿರ್ ಪ್ರೊಟೀನ್ ಅದರಲ್ಲಿರುವುದೊಂದು ವಿಶೇಷ.

ಹಸುವಿನ ಹಾಲು ಜೀರ್ಣವಾಗಲು 2ರಿಂದ 3 ತಾಸು ಬೇಕಿದ್ದರೆ ಆಡಿನ ಹಾಲು 20 ನಿಮಿಷದಲ್ಲಿ ಜೀರ್ಣವಾಗುವುದು. ಕಿಣ್ವಗಳು, ಲೋಹಧಾತುಗಳು, ಖನಿಜಗಳು ಅದರಲ್ಲಿ ಎಷ್ಟೋ ಪಟ್ಟು ಹೆಚ್ಚಾಗಿವೆ. ನೂರು ಮಿ.ಲೀ. ಆಡಿನ ಹಾಲಿನಲ್ಲಿ 180 ಗ್ರಾಂ ರಂಜಕವಿದ್ದು ಬಲಯುತವಾದ ಮೂಳೆ ಮತ್ತು ಹಲ್ಲುಗಳನ್ನು ಹೊಂದಲು ಅದು ನೆರವಾಗುತ್ತದೆ. ಇದನ್ನು ಬಳಸುವ ಶೇ.89 ಜನರಿಗೂ ಅದು ಅಲರ್ಜಿಯಾಗುವುದಿಲ್ಲ. ಶೇ. 93ರಷ್ಟು ಅಡ್ಡ ಪರಿಣಾಮಗಳಿಲ್ಲ. ಕೊಲೆಸ್ಟ್ರಾಲ್ ಅಂಶ ಎದೆಹಾಲಿನಲ್ಲಿ ಶೇ. 20ರ ತನಕ, ಹಸುವಿನ ಹಾಲಿನಲ್ಲಿ ಶೇ. 15ರಷ್ಟು ಇದ್ದರೆ ಆಡಿನ ಹಾಲಿನಲ್ಲಿರುವ ಪ್ರಮಾಣ ಕೇವಲ 12 ಮಾತ್ರ.

ಆಡಿನ ಹಾಲು ಎಲ್ಲ ವಯಸ್ಸಿನವರಿಗೂ ಆರೋಗ್ಯಕ್ಕೆ ಸಹಾಯಕಾರಿ. ಅದರಲ್ಲಿರುವ ಸುಣ್ಣದ ಅಂಶ ಮೂಳೆಗಳಿಗೆ ಸಂಬಂಧಿಸಿದ ಆಸ್ಟಿಯೊಪೊರೊಸಿಸ್ ಸಮಸ್ಯೆಯ ವಿರುದ್ಧ ಸೆಣಸಲು ಶಕ್ತವಾಗಿದೆ. ಜತೆಗಿರುವ ಕೊಬ್ಬು ದೇಹದ ತೂಕವನ್ನು ನಿಯಂತ್ರಿಸುತ್ತದೆ. ರಕ್ತದ ಒತ್ತಡ ನಿಯಮಿತಗೊಳಿಸಬಲ್ಲ ಪೊಟಾಷಿಯಂ ಕೂಡ ಇದೆ. ಇದರಿಂದ ತಯಾರಿಸುವ ಮೊಸರು ರಕ್ತದ ಒತ್ತಡ ನಿಯಂತ್ರಣದಲ್ಲಿ ಇನ್ನೂ ಸಮರ್ಥವಾಗಿದೆ. ನಮ್ಮ ದೇಹದ ಜೀರ್ಣಾಂಗದ ಆರೋಗ್ಯಕ್ಕೂ ಸಹಕಾರಿ ಯಾಗಿದೆ.

ಕರುಳಿನಲ್ಲಿ ಆಮ್ಲತೆಯುಂಟು ಮಾಡುವುದಿಲ್ಲ. ರಕ್ತಕ್ಕೆ ಬೇಗನೆ ಸೇರುತ್ತದೆ. ವಾಂತಿ, ಉದರಶೂಲೆ, ಅತಿಸಾರ, ಮಲಬದ್ಧತೆ, ವ್ರಣಗಳು, ಊಟವಾದ ಬಳಿಕ ಉಂಟಾಗುವ ಜಠರದ ಸಮಸ್ಯೆಗಳು, ಗ್ಯಾಸ್ಟ್ರಿಕ್ ಮುಂತಾದ ಅನೇಕ ತೊಂದರೆಗಳು ಆಡಿನ ಹಾಲಿನ ನಿತ್ಯ ಬಳಕೆಯಿಂದ ದೂರವಾಗುತ್ತವೆ.

ಎಳೆಯ ಮಕ್ಕಳಿಗೆ ಅನಿವಾರ್ಯವಾದಾಗ ಹಸುವಿನ ಹಾಲಿಗಿಂತ ಆಡಿನ ಹಾಲು ಕುಡಿಸುವುದು ಉತ್ತಮ ಎನ್ನಲಾಗಿದೆ. ಅದು ಊಟದಷ್ಟೇ ಪೂರ್ಣ ಆಹಾರವೆನಿಸುತ್ತದೆ. ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ರಕ್ತದಲ್ಲಿ ಹಿಮೊಗ್ಲೋಬಿನ್ ಮತ್ತು ಬಿಳಿ ಕಣಗಳನ್ನು ವೃದ್ಧಿಸುತ್ತದೆ. ಉಸಿರಾಟದ ಸಮಸ್ಯೆಯಿರುವವರಿಗೂ ಅದು ಉತ್ತಮ ಪಥ್ಯಾಹಾರ. ಕರುಳಿನಲ್ಲಿರುವ ಆತಂಕಕಾರಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಪ್ರಯೋಜನಕರವಾದ ಸೂಕ್ಷ್ಮಾಣುಗಳನ್ನು ಹೆಚ್ಚಿಸುವ ಕೊಬ್ಬಿನಾಮ್ಲಗಳು ಅದರಿಂದ ಲಭಿಸುತ್ತವೆ.

ದೈನಂದಿನ ಅಗತ್ಯಕ್ಕೆ ಬೇಕಾದಷ್ಟು ಅಯೋಡಿನ್ ಅದರಲ್ಲಿರುವುದರಿಂದ ಥೈರಾಯ್ಡ್ ಗ್ರಂಥಿಯನ್ನು ಸುಸ್ಥಿತಿಯಲ್ಲಿಡುತ್ತದೆ. ಬಿ ವರ್ಗದ 5 ಜೀವಸತ್ವಗಳು ಸೇರಿ 8 ಜೀವಸತ್ವಗಳು ಕೂಡಿವೆ. ‘ಡಿ’ ಜೀವಸತ್ವವೂ ಇದ್ದು ಅದು ಚರ್ಮದ ಕಾಂತಿ ಹೆಚ್ಚಲು ನೆರವಾಗುತ್ತದೆ. ಪಿತ್ತಕೋಶದ ಕಲ್ಲು, ಅಪಸ್ಮಾರ, ಫೈಬ್ರೋಸಿಸ್ ಇದನ್ನೆಲ್ಲ ನಿವಾರಿಸಲು ಆಡಿನ ಹಾಲು ಸಮರ್ಥವಾಗಿದೆ. ಹಾರ್ಮೋನುಗಳ ಬೆಳವಣಿಗೆಗೂ ಅದು ಸಹಕರಿಸುತ್ತದೆ.

ಪೇಟೆಯಲ್ಲಿ ಸಿಗುವ ಹಸುವಿನ ಪ್ಯಾಕೆಟ್ ಹಾಲಿನಿಂದ ಕೆನೆಯನ್ನು ಬೇರ್ಪಡಿಸಿದ್ದು ಪೋಷಕವಲ್ಲದ ಹಾಲನ್ನು ನಾವು ಬಳಸುತ್ತೇವೆ. ಆಡಿನ ಹಾಲಿನಲ್ಲಿ ಕೊಬ್ಬು ಸೂಕ್ಷ್ಮವಾದ ಗುಳಿಗೆಗಳ ರೂಪದಲ್ಲಿ ಬೆರೆತಿರುವು ದರಿಂದಾಗಿ ಅದರಿಂದ ಕೊಬ್ಬನ್ನು ಬೇರ್ಪಡಿಸಲು ಸಾಧ್ಯವಿಲ್ಲ. ರೋಗನಿರೋಧಕ ಶಕ್ತಿಯನ್ನು ಅಧಿಕಗೊಳಿಸುವ ಆಡಿನ ಹಾಲು ಕೊಂಚ ಒಗ್ಗದ ವಾಸನೆಯಿದ್ದರೂ ಆಡು ಎಲ್ಲ ಗಿಡಗಳನ್ನೂ ತಿನ್ನುವ ಕಾರಣ ಅದೊಂದು ವನೌಷಧಿಯೆಂಬುದನ್ನು ಮರೆಯಬಾರದು.

Comments are closed.