ಕರಾವಳಿ

ರಸ್ತೆ ಸರಿಪಡಿಸಿ, ವಿದ್ಯುತ್ ನೀಡಿ; ಅಹವಾಲು ಸಭೆಯಲ್ಲಿ ಮಕ್ಕಳ ಮನವಿ

Pinterest LinkedIn Tumblr

ಉಡುಪಿ: ನಮ್ಮ ಮನೆಗೆ ವಿದ್ಯುತ್ ಇಲ್ಲ, ಇದರಿಂದ ರಾತ್ರಿ ಓದಲು ಸಮಸ್ಯೆಯಾಗುತ್ತಿದೆ, ಶಾಲೆಗೆ ಬರಲು ಸರಿಯಾದ ರಸ್ತೆಯಿಲ್ಲ, ಮನೆಯ ಬಳಿ ಆಟವಾಡಲು ಮೈದಾನ ಇಲ್ಲ, ಮನೆಯಲ್ಲಿ ಶೌಚಾಲಯ ಇಲ್ಲ- ಇದು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಮೂಲಭೂತ ಸೌಕರ್ಯಗಳ ಸಮಸ್ಯೆ ಕುರಿತು ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ, ವಿವಿಧ ಶಾಲೆಯ ಮಕ್ಕಳು ಸಲ್ಲಿಸಿದ ಅಹವಾಲುಗಳು, ಈ ಎಲ್ಲಾ ಅಹವಾಲುಗಳಿಗೆ ಸೂಕ್ತ ರೀತಿಯಲ್ಲಿ, ಅತ್ಯಂತ ಶೀಘ್ರವಾಗಿ ಸ್ಪಂದಿಸಿ, ಪರಿಹಾರ ಒದಗಿಸುವಂತೆ ಹಾಗೂ ಈ ಬಗ್ಗೆ ಆಯೋಗಕ್ಕೆ ವರದಿಯನ್ನು ನೀಡುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗದ ಸದಸ್ಯೆ ಡಾ. ವನಿತಾ ತೊರವಿ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ಅಹವಾಲು ಸಲ್ಲಿಕೆಯಲ್ಲಿ, ಮಣಿಪಾಲ ಎಂಜೆಸಿ ಶಾಲೆಯ ವಿದ್ಯಾರ್ಥಿ ಮಣಿಕಂಠ ಮಾತನಾಡಿ, ರಾಹುಲ್ ನಗರದಲ್ಲಿ ವಾಸವಾಗಿರುವ ನನ್ನ ಮನೆಯಲ್ಲಿ ಶೌಚಾಲಯ ಇಲ್ಲ, ನಮಗೆ ಶೌಚಾಲಯ ಒದಗಿಸಿಕೊಡಿ ಎಂದು ಕೇಳಿದರು, ಈ ಕುರಿತಂತೆ ಬಾಲಕನ ಮನೆಯ ವಿಳಾಸವನ್ನು ಪತ್ತೆ ಮಡಿ, ಸರಿಯಾದ ಮಾಹಿತಿಯನ್ನು ನೀಡುವಂತೆ ಮಣಿಪಾಲ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತಿಳಿಸಿದ ವನಿತಾ ತೊರವಿ, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ನೇತಾಜಿ ನಗರದ 8 ನೇ ತರಗತಿ ವಿದ್ಯಾರ್ಥಿ ದೀಪಕ್ ಮಾತನಾಡಿ, ಶಾಲೆಗೆ ಬರುವ ರಸ್ತೆ ಸರಿ ಇಲ್ಲ, ಇದರಿಂದ ಅಪ್ಪನೊಂದಿಗೆ ಬೈಕ್ನಲ್ಲಿ ಬರುವಾಗ ಸ್ಕಿಡ್ ಆಗುತ್ತೆ, ಅಲ್ಲದೇ ಹಲವು ಮಂದಿ ಸಾರ್ವಜನಿಕರು ಬಿದ್ದು ಗಾಯಗೊಂಡಿದ್ದಾರೆ, ಅಲ್ಲದೇ ಈ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲ, ಮನೆ ಬಳಿ ಆಟವಾಡಲು ಮೈದಾನ ಇಲ್ಲ ಎಂದದರು, ಈ ಕುರಿತಂತೆ ಉತ್ತರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಇದು ಬಡಗಬೆಟ್ಟು ಪಂಚಾಯತ್ ವ್ಯಾಪ್ತಿಗೆ ಬರಲಿದ್ದು, ಇಲ್ಲಿ ವಸತಿ ನಿವೇಶನಕ್ಕೆ ಜಾಗ ಕಾಯ್ದಿರಿಸಲಾಗಿದೆ, ಇಲ್ಲಿ ಯಾವ ಯೋಜನೆಯಡಿ ರಸ್ತೆ ನಿರ್ಮಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಿ ಹಾಗೂ ವಸತಿ ನಿವೇಶನ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಟದ ಮೈದಾನಕ್ಕೆ ಜಾಗ ಮೀಸಲಿಡಲು ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಸರಳೇಬೇಟ್ಟು ಸಮೀಪದ ಬಿಜಾಪುರ ಕಾಲೋನಿಯಲ್ಲಿರುವ ನಮ್ಮ ಮನೆಯಲ್ಲಿ ವಿದ್ಯುತ್ ಇಲ್ಲ ಎಂದು ಮಂಜು ಮತ್ತು ರುಕ್ಮಿಣಿ ತಿಳಿಸಿ ಇದರಿಂದ ನಮ್ಮ ಓದಿಗೆ ಅಡ್ಡಿಯಾಗುತ್ತಿದೆ ಎಂದರು, ವಲಸಿಗರ ಕಾಲೋನಿ ನಿವಾಸಿಗಳಿಗೆ ಸೂಕ್ತ ದಾಖಲೆ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ನೀಡಲು ಅಡಚಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು, ಈ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರಲು ಇಚ್ಛಿಸಿದಲ್ಲಿ ಪೋಷಕರ ಮನ ಒಲಿಸಿ ಹಾಸ್ಟೆಲ್ಗೆ ಸೇರ್ಪಡೆ ಮಾಡುವಂತೆ ವನಿತಾ ತೊರವಿ ಹೇಳಿದರು.

ಶಾಲೆಗಳಲ್ಲಿ ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರ ನಿಯೋಜನೆ ಆಗಲಿ, ಹೆಚ್ಚುವರಿ ಶಿಕ್ಷಕರ ಕೊರತೆ ಆಗದಂತೆ ಡಿಡಿಪಿಐ ಕ್ರಮ ವಹಿಸುವಂತೆ ಹಾಗೂ ಯಾವುದೇ ಮಗು ಶಾಲೆಯಿಂದ ಹೊರಗುಳಿದು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತೊರವಿ ತಿಳಿಸಿದರು.

ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಂತೆ, ಮಣಿಪಾಲದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಉಪನ್ಯಾಸಕಿ ಐಡಾ ಡಿ ಸೋಜ ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು.ಬಿ ರೂಪೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಎನ್ ಗೊನ್ಸಾಲ್ವಿಸ್, ಜಿಲ್ಲಾ ಮಕ್ಕಳಾ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮೋಹನ್ ಉಪಸ್ಥಿತರಿದ್ದರು.

ಉಡುಪಿ ತಾಲೂಕು ಶಿಶು ಅಭಿವೃಧ್ದಿ ಯೋಜನಾಧಿಕಾರಿ ವೀಣಾ ಸ್ವಾಗತಿಸಿದರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ನಿರೂಪಿಸಿ, ವಂದಿಸಿದರು.

Comments are closed.