ಕರಾವಳಿ

ಸಾಮಾನ್ಯವಾಗಿ ನಿರ್ಲಕ್ಷ ತೋರಿಸುವ ತರಕಾರಿಗಳಲ್ಲೂ ಇವೇ ಆರೋಗ್ಯಕರ ಗುಟ್ಟು

Pinterest LinkedIn Tumblr

ಮಂಗಳೂರು: ನಾವು ಪುಟ್ಟಮಕ್ಕಳಿದ್ದಾಗ ನಮ್ಮ ಹಿರಿಯರು ನಮಗೆ ತರಕಾರಿ ಸೇವಿಸುವ ಸಲಹೆ ನೀಡಿದ್ದಾರೆ. ಅದೇ ರೀತಿ ಇನ್ನು ಮುಂದಕ್ಕೆ ನಾವೂ ನಮ್ಮ ಮುಂದಿನ ಪೀಳಿಗೆಗೆ ಇಂತಹದ್ದೇ ಸಲಹೆ ನೀಡುತ್ತೇವೆ. ನಮ್ಮ ಜೀವನದಲ್ಲಿ ಹಾಸು ಹೊಕ್ಕಿರುವ ನಮ್ಮ ಅಡುಗೆ ಕೋಣೆಯಲ್ಲಿ ಅಥವಾ ಫ್ರಿಡ್ಜ್ ಗಳಲ್ಲಿ ಕಾಣಸಿಗುವ ತೀರಾ ಸಾಮಾನ್ಯ ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ, ಬೀಟ್ರೂಟ್, ಗಳೆಂದರೆ ನಮಗೆ ಸ್ವಲ್ಪ ನಿರ್ಲಕ್ಷ್ಯವೇ. ಅವುಗಳಿಗೆ ಬೆಲೆಯೇರಿದಾಗ ಮಾತ್ರವೇ ನಮಗೆ ಅವುಗಳ ‘ಬೆಲೆ’ಅರಿವಾಗುವುದೂ ಇದೆ. ಸಸ್ಯಾಹಾರಿಗಳಂತೂ ಹಸಿಯಾಗಿಯೋ ಇನ್ಯಾವ ರೀತಿಯೋ ತರಕಾರಿಗಳನ್ನು ಸೇವಿಸುತ್ತಾರೆಯೇ.. ಶುದ್ಧ ಸಸ್ಯಾಹಾರಿಗಳಲ್ಲದವರೂ ತಮ್ಮ ಆಹಾರ ಪದ್ಧತಿಯಲ್ಲಿ ತರಕಾರಿಗಳನ್ನು ಸೇರಿಸಿಕೊಂಡಿರುತ್ತಾರೆ. ಒಮ್ಮೆ ಕೋಸಂಬರಿಯಾಗಿಯೋ, ಹೊಸ ಶೈಲಿಯಲ್ಲಿ ಹೇಳುವುದಾದರೇ ‘ಸಲಾಡ್’ ಗಳಾಗಿಯೋ ಮಾಂಸಾಹಾರಿಗಳೂ ತರಕಾರಿಗಳನ್ನು ನಿತ್ಯ ಬಳಸುತ್ತಾರೆ.

ಅವುಗಳಲ್ಲಿರುವ ಆರೋಗ್ಯದ ಗುಟ್ಟುಗಳ ಬಗ್ಗೆ ತಿಳಿಯೋಣ..
ಈರುಳ್ಳಿ:
ಅಡುಗೆಗೆ ಈರುಳ್ಳಿ ಕತ್ತರಿಸುವಾಗ ಕಣ್ಣು ಮೂಗಿನಿಂದೆಲ್ಲಾ ನೀರೊಸರುವುದುಂಟು, ಆಗ “ಕಂಬನಿ ತಾರದ ಈರುಳ್ಳಿಗಳಿದ್ದರೆ ಎಷ್ಟು ಚೆನ್ನಿತ್ತು…” ಎಂದು ಮಹಿಳೆಯರು ಅಂದು ಕೊಳ್ಳುವುದಿದೆ. ಆದರೆ ಈರುಳ್ಳಿ ಕತ್ತರಿಸಿದಾಗ ನಿಮಗೆ ಕಣ್ಣೀರು ಬಂದರೆ ಅದು ಒಳ್ಳೆಯದೇ. ಏಕೆಂದರೆ ಈರುಳ್ಳಿಯಲ್ಲಿ ‘ಥಾಯಿಸಲ್ಫಿನೇಟ್’ ಗಳಿರುವುದರಿಂದ ಅದನ್ನು ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತದೆ. ಈ ಥಾಯಿಸಲ್ಫಿನೇಟ್ ಗಳು ನೈಸರ್ಗಿಕವಾಗಿ ರಕ್ತವನ್ನು ತೆಳುವಾಗಿಸುತ್ತದೆ ಮತ್ತು ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಈರುಳ್ಳಿಗಳಲ್ಲಿ ವಿಟಾಮಿನ್ C, ಕ್ಯಾಲ್ಶಿಯಮ್, ಫೋಲಿಕ್ ಆ್ಯಸಿಡ್, ಮತ್ತು ಖನಿಜಾಂಶಗಳು ಯಥೇಚ್ಛವಾಗಿದೆ. ಈರುಳ್ಳಿಯ ನಿಯಮಿತ ಸೇವನೆಯಿಂದ ಕರುಳಿನ ರೋಗ(ಅಲ್ಸರ್) ಗಳನ್ನು ತಡೆಗಟ್ಟಬಹುದೆಂದು ಸಂಶೋದನೆಗಳು ಹೇಳುತ್ತವೆ.

ಮಶ್ರೂಮ್:
ಮಶ್ರೂಮ್ ಗಳು ನೈಸರ್ಗಿಕವಾದ ‘ಕ್ಯಾನ್ಸರ್ ಫೈಟರ್’ ಗಳಾಗಿವೆ. ನಿಯಮಿತವಾದ ಮಶ್ರೂಮ್ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಗಳು ಹೆಚ್ಚುತ್ತವೆ ಮತ್ತು ದೊಡ್ಡಕರುಳು, ಹೊಟ್ಟೆ ಮತ್ತು ಜನನಾಂಗದ ಕ್ಯಾನ್ಸರ್ ಗಳನ್ನು ಮತ್ತು ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಗಳನ್ನು ತಡೆಗಟ್ಟಬಹುದು ಎಂದು ಸಂಶೋದನೆಗಳಿಂದ ಸಾಬಿತಾಗಿದೆ. ಮಶ್ರೂಮ್ ಗಳಲ್ಲಿ ವಿಟಮಿನ್ D ಯೊಂದಿಗೆ, ಪಾಲಿಸ್ಯಾಕರೈಡ್ ಗಳಿವೆ. ಪಾಲಿಸ್ಯಾಕರೈಡ್ ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನೆನಪಿರಲಿ: ಮಶ್ರೂಮನ್ನು ಇತರ ತರಕಾರಿಗಳಂತೆ ಹಸಿಯಾಗಿ ಸೇವಿಸದಿರಿ. ಮಶ್ರೂಮ್ ಗಳನ್ನು ಚೆನ್ನಾಗಿ ತೊಳೆದು ಚೆನ್ನಾಗಿ ಬೇಯಿಸಿಯೇ ತಿನ್ನಿ.

ಕ್ಯಾರೆಟ್ :
ಕೆಂಪು, ಕೇಸರಿ ಬಣ್ಣಗಳ ಕ್ಯಾರೆಟ್ ಗಳು ನೋಡಲೂ ಸುಂದರವಾಗಿರುತ್ತವೆ. ಅದರಲ್ಲಿರುವ ಬೀಟಾಕೆರೊಟಿನ್ ಗಳಿಂದಾಗಿ ಕ್ಯಾರೆಟ್ ಗಳಿಗೆ ಕೇಸರಿ ಬಣ್ಣ ಬರುತ್ತದೆ. ಇವುಗಳು ಕಣ್ಣಿನ ದೃಷ್ಟಿಗೆ ಅತ್ಯುತ್ತಮವಾದುದಾಗಿದೆ. ಕ್ಯಾರೆಟ್ ಗಳ ನಿಯಮಿತ ಸೇವನೆಯಿಂದ ಇರುಳುಕುರುಡನ್ನು ತಡೆಗಟ್ಟಬಹುದು. ಇದು ರಾತ್ರಿಯ ವೇಳೆ ವಾಹನ ಚಲಾಯಿಸುವವರಿಗೆ ಬಹಳಾ ಪ್ರಯೋಜನಕಾರಿಯಾಗಿದೆ. ಕ್ಯಾರೆಟ್ ಗಳು ಅತ್ಯುತ್ತಮ ನಂಜು ನಿರೋಧಕ (ಆ್ಯಂಟಿಸೆಪ್ಟಿಕ್) ಗಳೂ ಆಗಿವೆ. ಇದು ದೇಹದೊಳಗಿನ ರೋಗಾಣುಗಳನ್ನು ಕ್ಷಿಪ್ರವಾಗಿ ನಾಶಮಾಡುತ್ತದೆ. ಕ್ಯಾರೆಟ್ ಗಳನ್ನು ಬೇಯಿಸಿ ಹಿಚುಕಿ ಸೋಸಿಕೊಂಡು ಅದರ ರಸವನ್ನು ದೇಹದ ಗಾಯಗಳಿಗೆ ಹಚ್ಚಿದರೆ ಗಾಯಗಳು ಬಹು ಬೇಗನೇ ಗುಣವಾಗುತ್ತವೆ.

ಬೆಳ್ಳುಳ್ಳಿ:
ಬೆಳ್ಳುಳ್ಳಿಗಳು ಅತ್ಯದ್ಭುತ ಔಷಧೀಯ ಗುಣಗಳುಳ್ಳ ತರಕಾರಿಗಳಾಗಿವೆ. ಹಲವಾರು ಜನ ಇದರ ವಾಸನೆಗಾಗಿ ಇದನ್ನು ದೂರವಿಡುವುದಿದೆ. ಮತ್ತೆ ಕೆಲವರಿಗೆ ಬೆಳ್ಳುಳ್ಳಿಯ ಸುಗಂಧ ಇಷ್ಟವಾಗುವುದೂ ಇದೆ. ಹಾಗಾಗಿಯೇ ಭಾರತದಲ್ಲಿ ಬೆಳ್ಳುಳ್ಳಿಯನ್ನು ಅತಿ ಹೆಚ್ಚಾಗಿ ಉಗ್ಗರಣೆಗಾಗಿ ಮಾತ್ರವೇ ಬಳಸಲಾಗುತ್ತದೆ. ಬೆಳ್ಳುಳ್ಳಿಗಳು ಆ್ಯಂಟಿ ಬ್ಯಾಕ್ಟೀರಿಯಲ್ ಗಳು ಮತ್ತು ಆ್ಯಂಟಿ ವೈರಲ್ ಗಳಾಗಿವೆ. ಇವುಗಳನ್ನು ಪ್ಲೇಗ್ ನಂತಹಾ ಮಾರಕ ರೋಗ ನಿಯಂತ್ರಿಸಲೂ ಬಳಸಬಹುದು. ಬೆಳ್ಳುಳ್ಳಿಗಳು ಅಷ್ಟು ಪ್ರಬಲವಾದ ಸಾಂಬಾರ ಪದಾರ್ಥಗಳಾಗಿವೆ. ತಾಜಾ ಬೆಳ್ಳುಳ್ಳಿಗಳು ದೇಹದೊಳಗೆ ಹೊಕ್ಕಿರುವ ಅಪಾಯಕಾರೀ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ. ಬೆಳ್ಳುಳ್ಳಿ ಸೇವನೆಯು ಪುರುಷರಲ್ಲಿ ಕಾಣಿಸಿಕೊಳ್ಳುವ ಜನನಾಂಗದ ಉರಿಯೂತ ಮತ್ತು ಕ್ಯಾನ್ಸರ್ ಗಳನ್ನು ತಡೆಯುತ್ತದೆ.

Comments are closed.