ಅಂತರಾಷ್ಟ್ರೀಯ

ಉಡುಪಿ ಮೀನುಗಾರರ ನಾಪತ್ತೆ ಪ್ರಕರಣ; ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಸಂಸದೆ ಶೋಭಾ

Pinterest LinkedIn Tumblr

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೊರಟು ದಿನಾಂಕ 15-12-2018 ರಿಂದ ನಾಪತ್ತೆಯಾಗಿರುವ ’ಸುವರ್ಣ ತ್ರಿಭುಜ’ ಮೀನುಗಾರಿಕಾ ಬೋಟಿನಲ್ಲಿದ್ದ ಮೀನುಗಾರರನ್ನು ಕಡಲುಗಳ್ಳರು ಅಥವಾ ಭಯೋತ್ಪಾದಕರು ಅಪಹರಿಸಿರುವ ಸಾಧ್ಯತೆಗಳಿದ್ದು ಇವರ ತ್ವರಿತ ಪತ್ತೆ ಹಚ್ಚುವಿಕೆಗಾಗಿ ಕೇಂದ್ರ ಗೃಹ ಸಚಿವಾಲಯ ಮಧ್ಯ ಪ್ರವೇಶಿಸಬೇಕೆಂದು ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ರವರನ್ನು ಆಗ್ರಹಿಸಿದ್ದಾರೆ.

ಇಂದು (ಬುಧವಾರ) ಹೊಸದಿಲ್ಲಿಯಲ್ಲಿ ಲೋಕಸಭಾ ಅಧಿವೇಶನದ ಪಾರ್ಶ್ವದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ರವರನ್ನು ಭೇಟಿ ಮಾಡಿದ ಸಂಸದೆ, ತತ್ಸಂಬಂಧವಾಗಿ ತಾನು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರವನ್ನು ಹಸ್ತಾಂತರಿಸಿದರು.

ನಾಪತ್ತೆಯಾದ ಮೀನುಗಾರರ ಕುಟುಂಬದವರು ದಿಕ್ಕು ತೋಚದಂತಾಗಿದ್ದಾರೆ. ಕರ್ನಾಟಕ ಕರಾವಳಿಯ ಸಮಸ್ತ ಮೀನುಗಾರರು ಚಿಂತಾಕ್ರಾಂತರಾಗಿದ್ದು ಈ ಭಾಗದಲ್ಲಿ ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ. ನಾಪತ್ತೆಯಾದವರ ಪತ್ತೆ ಕಾರ್ಯ ಚುರುಕಾಗಿ ನಡೆಯುತ್ತಿಲ್ಲವೆಂಬ ಅಸಮಾಧಾನ ವ್ಯಾಪಕವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವರಿಗೆ ವಿವರಿಸಿದರು.

ಸಂಸದರ ಮನವಿಗೆ ಸ್ಪಂದಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಈ ಬಗ್ಗೆ ತಕ್ಷಣ ಪರಿಶೀಲಿಸಿ ಭಯೋತ್ಪಾದಕರು ಅಥವಾ ಕಡಲುಗಳ್ಳರು ಸುವರ್ಣ ತ್ರಿಭುಜ ಬೋಟನ್ನು ಅಪಹರಿಸಿರುವ ಸಾಧ್ಯತೆಯ ಬಗ್ಗೆ ಗಂಭೀರವಾಗಿ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಗಿ ತಿಳಿಸಿದರು ಅಲ್ಲದೆ ಪಶ್ಚಿಮ ಕರಾವಳಿಯನ್ನು ಹೊಂದಿರುವ ವಿವಿಧ ರಾಜ್ಯಗಳ ಪೋಲೀಸರಿಗೆ ಈ ಕುರಿತು ಸಮನ್ವಯದಿಂದ ಕ್ಷಿಪ್ರವಾಗಿ ತನಿಖೆ ನಡೆಸಲು ತಿಳಿಸುವುದಾಗಿ ಸಂಸದೆಯವರಿಗೆ ಭರವಸೆ ನೀಡಿದ್ದಾರೆ.

Comments are closed.