ಕರಾವಳಿ

ಮೇರಮಜಲು ಶ್ರೀ ಮಾತಾ ಲಕ್ಷಣಿ ಶಾಂತಿಧಾಮದ ದಶಮಾನೋತ್ಸವ :’ಶಾಂತಿಧಾಮ ಕಟ್ಟಿ ಬೆಳೆಸಿದ ಸಾಧನೆ ದೊಡ್ಡದು’: ಒಡಿಯೂರು ಶ್ರೀ

Pinterest LinkedIn Tumblr

ಮಂಗಳೂರು: ‘ಕಳೆದ ಒಂದು ದಶಕದಿಂದ ನೊಂದ ಜೀವಿಗಳಿಗೆ ಬೆಳಕಾಗಿ ವೃದ್ಧರ ಹಾಗೂ ರೋಗಿಗಳ ಸೇವೆಯನ್ನು ಕೈಗೊಂಡಿರುವ ಕಾಂತಾಡಿಗುತ್ತು ಹರೀಶ್‌ ಪೆರ್ಗಡೆ ಅವರ ಮಾನವ ಪ್ರೀತಿಗಾಗಿ ನಾವೆಲ್ಲ ಅವರೊಂದಿಗೆ ಇದ್ದೇವೆ. ಶಾಂತಿಧಾಮವನ್ನು ಕಟ್ಟಿ ಬೆಳೆಸುವಲ್ಲಿ ಅವರ ಶ್ರಮ ಸಾಧನೆಗೆ ಯಾವುದೂ ಸಾಟಿ ಆಗದು. ನಿರ್ಗತಿಕರಿಗೆ ಆಶ್ರಯ, ಕಾಲಕ್ಕೆ ತಕ್ಕಂತೆ ಊಟೋಪಚಾರ ವ್ಯವಸ್ಥೆ, ಆರೋಗ್ಯದ ಕಾಳಜಿಯನ್ನು ಉಚಿತವಾಗಿ ಒದಗಿಸುವ ಸೇವೆಯು ಅಭಿನಂದನೀಯ’ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ಅವರು ಇತ್ತೀಚೆಗೆ ಮೇರಮಜಲು ಶ್ರೀ ಮಾತಾ ಲಕ್ಷಣಿ ಶಾಂತಿಧಾಮ (ವೃದ್ಧಾಶ್ರಮ) ಸಂಸ್ಥೆಯ ದಶ ಮಾನೋತ್ಸವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಂಚಾಲಕ ಕೃಷ್ಣ ಕುಮಾರ್‌ ಪೂಂಜರನ್ನು ಸ್ವಾಮೀಜಿ ಸಮ್ಮಾನಿಸಿದರು.

ಕಟ್ಟಡ ಉದ್ಘಾಟನೆ ಮಾಡಿದ ದುಬಾಯಿ ವಿಶ್ವ ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುದಾಬಿ ಸಭಾಧ್ಯಕ್ಷತೆ ವಹಿಸಿದ್ದರು.ಅವರು ಮಾತನಾಡಿ, ‘ಪೆರ್ಗಡೆ ಅವರು ದುಃಖಿತರಿಗೆ ಸಾಂತ್ವನ, ನೋವುಂಡವರಿಗೆ ಪ್ರೀತಿ ತೋರುವ ಮೂಲಕ ಮಾನವ ಸೇವೆಯ ನಿಜವಾದ ಕಾಳಜಿ ತೋರಿದ್ದಾರೆ. ದುಃಖಿತರ ಸೇವೆ ಮಾಡುವ ಪೆರ್ಗಡೆಯವರ ನಿಸ್ವಾರ್ಥ ಕೆಲಸ ಇತರರಿಗೆ ಆದರ್ಶಪ್ರಾಯವಾದುದು. ಅವರ ಜತೆ ನಾವಿದ್ದೇವೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಮಾಜಿ ಅಧ್ಯಕ್ಷ ಬಿ. ಸದಾನಂದ ಪೂಂಜ ಮಾತನಾಡಿದರು. ಕತಾರ್‌ ಕನ್ನಡ ಸಂಘದ ಉಪಾಧ್ಯಕ್ಷ ಮೂಡಂಬೈಲ್‌ ರವಿ ಶೆಟ್ಟಿ ಕತಾರ್‌ ಶುಭ ಹಾರೈಸಿದರು. ಉದ್ಯಮಿ ಜಗದೀಶ ಅಡಪ ಚೆನ್ನೈ, ಅಜಿತ್‌ ಶೆಟ್ಟಿ ಕಡಬ, ಮೇರಮಜಲು ಗ್ರಾ.ಪಂ.ಅಧ್ಯಕ್ಷ ಸತೀಶ್ ನಾಯಕ್, ಮಾಜಿ ಅಧ್ಯಕ್ಷ ಯೋಗೀಶ ಪ್ರಭು, ಗಣ್ಯರಾದ ಶಿವಪ್ಪ ಸುವರ್ಣ ಪಕ್ಕಳಪಾದೆ ಮೊದಲಾದವರು ಉಪಸ್ಥಿತರಿದ್ದರು. ಸಾಹಿತಿ-ಸಂಘಟಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

ಅನಾಥ ಜೀವಗಳಿಗೆ ಉಚಿತ ಆಶ್ರಯ :

ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಸಂಸ್ಥಾಪಕ ಕಾಂತಾಡಿಗುತ್ತು ಹರೀಶ್‌ ಪೆರ್ಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ‘ನನ್ನ ಕುಟುಂಬದ ಸಹಾಯ-ಸಹಕಾರದಲ್ಲಿ ಶಾಂತಿಧಾಮ ಕಟ್ಟಿ ಬೆಳೆಸಲು ಸಾಧ್ಯವಾಗಿದೆ. ಮಕ್ಕಳಿಂದ ಮತ್ತು ಬಂಧುಗಳಿಂದ ತಿರಸ್ಕರಿಸಲ್ಪಟ್ಟ, ಜೀವನದ ಸಂಧ್ಯಾ ಕಾಲದಲ್ಲಿ ಅನಾಥರಾದ ಜೀವಗಳಿಗೆ ಇಲ್ಲಿ ಉಚಿತ ಆಶ್ರಯ ನೀಡಿ ಸೇವೆ ಮಾಡುತ್ತಾ ಹತ್ತು ವರ್ಷಗಳನ್ನು ಪೂರೈಸಲಾಗಿದೆ. ದಶಮಾನೋತ್ಸವ ಅಂಗವಾಗಿ ದಿ| ಕಲ್ಲಾಡಿ ದರ್ಬೆ ನಾರಾಯಣ ಅಡಪ ಮತ್ತು ದಿ| ಕಡ್ವಾಯಿ ಮಹಾಬಲ ಶೆಟ್ಟರ ಸ್ಮರಣಾರ್ಥ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಸಹಕಾರ ನೀಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ’ ಎಂದರು. ಶಶಿ ಪೆರ್ಗಡೆ ವಂದಿಸಿದರು.

ಮಾಯಕೊದ ಬಿನ್ನೆದಿ’ ತಾಳಮದ್ದಳೆ :

ಸಭಾಕಾರ್ಯಕ್ರಮದ ಪೂರ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ‘ಮಾಯಕೊದ ಬಿನ್ನೆದಿ’ ತುಳು ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಪ್ರಸಂಗಕರ್ತ ಹರೀಶ ಶೆಟ್ಟಿ ಸೂಡ (ಭಾಗವತರು), ರಾಮ ಹೊಳ್ಳ ಸುರತ್ಕಲ್, ಸುದಾಸ್ ಕಾವೂರು ಮತ್ತು ಚೇತನ್ ಸಚ್ಚರಿಪೇಟೆ ಇದ್ದರು. ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀರಾಮ), ಜಬ್ಬಾರ್ ಸಮೊ(ಶೂರ್ಪನಖಿ), ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ಸೀತೆ), ಗಣೇಶ್ ಶೆಟ್ಟಿ ಕನ್ನಡಿಕಟ್ಟೆ(ಲಕ್ಷ್ಮಣ) ಅರ್ಥಧಾರಿಗಳಾಗಿದ್ದರು.

ರಾತ್ರಿ ಅನ್ನಸಂತರ್ಪಣೆ, ಉಮೇಶ್ ಮಿಜಾರು ತಂಡದಿಂದ ತುಳು ಹಾಸ್ಯ ನಾಟಕ, ತಡರಾತ್ರಿ ಗುಳಿಗ ಕೋಲ ನಡೆಯಿತು.

Comments are closed.