ಕರಾವಳಿ

ಮಂಗಳೂರಿನಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ : 1.23 ಲಕ್ಷ ರೂ.ವರೆಗಿನ ಸೀರೆಗಳು ಲಭ್ಯ

Pinterest LinkedIn Tumblr

ಮಂಗಳೂರು, ಡಿಸೆಂಬರ್.14: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ (ಕೆ.ಎಸ್.ಐ.ಸಿ ) ವತಿಯಿಂದ ಕರ್ನಾಟಕದ ಪಾರಂಪಾರಿಕ ಉತ್ಪನ್ನವಾದ “ಮೈಸೂರ್ ಸಿಲ್ಕ್” ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಡಿಸೆಂಬರ್ 13ರಿಂದ 17ರವರೆಗೆ ನಗರದಲ್ಲಿ ಏರ್ಪಡಿಸಲಾಗಿದೆ.

ಲಾಲ್‌ಭಾಗ್ ಸಮೀಪದ ಮಹಾನಗರ ಪಾಲಿಕೆ ಕಚೇರಿ ಬಳಿಯ ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿ ಸಭಾಂಗಣದಲ್ಲಿ ಆಯೋಜಿಸಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಗುರುವಾರ ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಮೈಸೂರು ಸಿಲ್ಕ್ ಸೀರೆಗಳು ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯ ಸೊಬಗು. ರೇಷ್ಮೆ ಸೀರೆಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಒಂದು ಕಾಲದಲ್ಲಿ ರಾಜ ಮನೆತನದವರಿಗೆ ಮಾತ್ರ ಸೀಮಿತವಾಗಿದ್ದ ಮೈಸೂರು ರೇಷ್ಮೆ ಸೀರೆಗಳು ಇಂದು ಜನಸಾಮಾನ್ಯರಿಗೂ ಮಿತವ್ಯಯದಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ರಿಯಾಯಿತಿ ದರದಲ್ಲಿ ಮಾರಾಟವನ್ನು ನಡೆಸುತ್ತಿದೆ ಎಂದರು.

ಈ ಸಂದರ್ಭ ಕ್ರೇಪ್ ಸಿಲ್ಕ್‌ನಲ್ಲಿ ಬುಟ್ಟಾ ವಿನ್ಯಾಸದಿಂದ ಕೂಡಿದ 70,000 ರೂ. ವೌಲ್ಯದ ಸೀರೆಯನ್ನು ಮಾರುಕಟ್ಟೆಗೆ ಬಿಡುಗಡೆ ಗೊಳಿಸಲಾಯಿತು. ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕೆ.ಎಸ್.ಐ.ಸಿ ಮಾರುಕಟ್ಟೆ ಮ್ಯಾನೇಜರ್ ಭಾನುಪ್ರಕಾಶ್ ಎಸ್. ಮಾತನಾಡಿ, ಜರಿರಹಿತ ಮೈಸೂರು ಸಿಲ್ಕ್ ಸೀರೆಗಳು 5,700 ರೂ.ಗಳಿಂದ ಲಭ್ಯವಿದ್ದು, ಜರಿಯಿಂದ ಕೂಡಿದ ಸೀರೆಗಳು 14,000 ರೂನಿಂದ 1.23 ಲಕ್ಷ ರೂ.ವರೆಗಿನ ಸೀರೆಗಳು ಲಭ್ಯವಿದೆ ಎಂದರು.

ಸಾಂಪ್ರದಾಯಿಕ ಮೈಸೂರು ಸಿಲ್ಕ್ ಸೀರೆಗಳಲ್ಲದೆ ಕೆ.ಎಸ್.ಐ.ಸಿ.ಯು ಈಗ ನಾಜೂಕಾದ ವಿನ್ಯಾಸದ ಸಂಗ್ರಹಿತ “ಕ್ರೇಪ್ ಡಿ ಚೈನ್” ಸೀರೆಗಳನ್ನು ಹಾಗೂ ಜಾರ್ಜೆಟ್ ಮತ್ತು ಸಾದಾ ಮುದ್ರಿತ ಸೀರೆಗಳನ್ನು, ಟೈ, ಸ್ಕಾರ್ಫ್ ಇತ್ಯಾದಿ ಉತ್ಪನ್ನಗಳನ್ನು ಪ್ರದರ್ಶಿತಗೊಳಿಸುತ್ತಿದೆ. ಇದಲ್ಲದೆ ನವನವೀನ “ವಿವಾಹ ಸಂಗ್ರಹ” ಸೀರೆಗಳನ್ನು ಪರಿಚಯಿಸಲಾಗಿದೆ ಹಾಗೂ ಕೆ.ಎಸ್.ಐ.ಸಿ.ಯು ತನ್ನ ಉತ್ಪನ್ನಗಳ ಮೇಲೆ ಶೇಕಡಾ 25% ರ ವರೆಗೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ ಎಂದು ಹೇಳಿದರು.

ಭಾರತದಲ್ಲಿ ದೊರೆಯುವ ರೇಷ್ಮೆ ವಸ್ತ್ರಗಳಿಗಿಂತ “ಮೈಸೂರ್ ಸಿಲ್ಕ್” ವಿಭಿನ್ನವಾಗಿದೆ. ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದೆ. ಇದು ಬಟ್ಟೆಗಳಿಗೆ ವಿಶಿಷ್ಟವಾದ ಹೊಳಪು ಮತ್ತು ಭೌಗೋಳಿಕ ಸುವಾಸನೆಯನ್ನು ನೀಡುತ್ತದೆ. ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳು ಈಗಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಮತ್ತು ಬೇಡಿಕೆಯಲ್ಲಿರುವ ರೇಷ್ಮೆ ಸೀರೆಗಳಾಗಿವೆ. ಅದರಲ್ಲೂ ಮಹಿಳೆಯರಿಗೆ ವಿವಾಹಗಳ ಮತ್ತು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಬಹು ಅಚ್ಚುಮೆಚ್ಚಿನ ಆಯ್ಕೆಯ ಸೀರೆ “ಮೈಸೂರು ಸಿಲ್ಕ್” ಸೀರೆಗಳಾಗಿವೆ ಎಂದು ಹೇಳಿದರು.

ಮೈಸೂರು ಸಿಲ್ಕ್ ಸೀರಿಗೆ ಉಪಯೋಗಿಸಲ್ಪಡುವ ರೇಷ್ಮೆಯು ಪರಿಶುದ್ಧವಾಗಿದ್ದು, ಜರಿಯು ಪರಿಶುದ್ಧ ಬೆಳ್ಳಿ ಹಾಗೂ ಚಿನ್ನದ ಲೇಪನದಿಂದ ಕೂಡಿರುತ್ತದೆ. (ಶೇ. 0.65 ಚಿನ್ನ ಹಾಗೂ ಶೇ. 65 ಬೆಳ್ಳಿಯದ್ದಾಗಿದೆ). ಕೆಎಸ್‌ಐಸಿಯ ಮೈಸೂರು ಸಿಲ್ಕ್ ಸೀರೆಗಳು ಭೌಗೋಳಿಕ ಗುರುತಿನ ನೋಂದಣಿ ಜಿಐ-11 ಪಡೆದುಕೊಂಡಿವೆ. ನಿಗಮಕ್ಕೆ 2016-17ನೆ ಸಾಲಿನ ಕರ್ನಾಟಕ ಸಾರ್ವಜನಿಕ ಉದ್ದಿಮೆಗಳಿಗೆ ಪ್ರದಾನ ಮಾಡಲಾಗುವ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿ ಲಭ್ಯವಾಗಿದೆ ಎಂದು ಹೇಳಿದರು.

ಪ್ರತೀ ವರ್ಷವೂ ರೇಷ್ಮೆಯಲ್ಲಿ ವಿಭಿನ್ನ ವಿನ್ಯಾಸ ಹಾಗೂ ವೌಲ್ಯವರ್ಧಿತ ಸೀರೆಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನವನ್ನು ಕೆಎಸ್ ಐಸಿ ಮಾಡುತ್ತಿದೆ. 106 ವರ್ಷಗಳ ಇತಿಹಾಸವನ್ನು ಹೊಂದಿರುವ ಕೆಎಸ್‌ಐಸಿಯ ಉತ್ಪನ್ನಗಳು ಇತರ ಯಾವುದೇ ಮಳಿಗೆಯಲ್ಲಿ ಲಭ್ಯವಿರುವುದಿಲ್ಲ. ಈ ರೀತಿಯ ಪ್ರದರ್ಶನ ಅಥವಾ ಕೆಎಸ್‌ಐಸಿಯ ಮಳಿಗೆಗಳಲ್ಲಿ ಮಾತ್ರವೇ ಮೈಸೂರು ಸಿಲ್ಕ್ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ. ಮೈಸೂರು ಸಿಲ್ಕ್ ಸೀರೆಗಳಲ್ಲಿ ಉಪಯೋಗಿಸುವ ರೇಷ್ಮೆ ಅಪ್ಪಟವಾಗಿದ್ದು, ಗ್ರಾಹಕರಿಗೆ ಯಾವುದೇ ಅನುಮಾನ ಬೇಡ ಎಂದು ಮೈಸೂರು ಸಿಲ್ಕ್ ಸೀರೆಗಳ ಬಗ್ಗೆ ಭಾನುಪ್ರಕಾಶ್ ಅವರು ಸಮಗ್ರ ಮಾಹಿತಿ ನೀಡಿದರು.

ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ :

“ಮೈಸೂರ್ ಸಿಲ್ಕ್” ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಡಿಸೆಂಬರ್ 13ರಿಂದ 17ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಐದು ದಿನಗಳ ಪ್ರದರ್ಶನ ಮಾರಾಟ ನಡೆಯಲಿದೆ.

Comments are closed.