ಕರಾವಳಿ

ಜನತೆಯ ಹೃದಯಗಳನ್ನು ಬೆಸೆದ ತೂಗು ಸೇತುವೆಗಳು : ತೂಗು ಸೇತುವೆಗಳ ಸರದಾರ ಖ್ಯಾತಿಯ ಗಿರೀಶ್ ಭಾರಧ್ವಜ್

Pinterest LinkedIn Tumblr

ಮಂಗಳೂರು : ದೇಶದೆ ಹಲವೆಡೆ ಬಹುಕಾಲದ ಅಗತ್ಯತೆಗಳಿಗೆ ಸ್ಪಂದಿಸಿ ತಾವು ನಿರ್ಮಿಸಿರುವ ತೂಗು ಸೇತುವೆಗಳು ಗ್ರಾಮೀಣ ಭಾರತವನ್ನು ಬೆಸೆಯುವುದರ ಜತೆಗೆ ಜನತೆಯ ಕನಸು, ಪ್ರೀತಿ ಮತ್ತು ಹೃದಯಗಳನ್ನು ಬೆಸೆದಿರುವ ಬಗ್ಗೆ ಅಭಿಮಾನವಿದೆ ಎಂದು ತೂಗು ಸೇತುವೆಗಳ ಸರದಾರ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಬಿ.ಗಿರೀಶ್ ಭಾರಧ್ವಜ್ ಹೇಳಿದರು.

ಅವರು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳ ವೇದಿಕೆ ‘ಸ್ಪೆಕ್ಟ್ರಮ್’ ಉದ್ಘಾಟಿಸಿ ಗ್ರಾಮೀಣ ಭಾರತವನ್ನು ಜೋಡಿಸಿದ ತೂಗು ಸೇತುವೆಗಳು ಕುರಿತಂತೆ ಉಪನ್ಯಾಸ ನೀಡಿದರು.

ಜನರ ಹಲವು ದಶಕಗಳ ಸಂಕಷ್ಟವನ್ನು ಹಲವೆಡೆ ನಮ್ಮ ತೂಗು ಸೇತುವೆಗಳು ನಿವಾರಿಸಿದಾಗ ಅಲ್ಲಿನ ಜನತೆಯಲ್ಲಿ ಕಂಡ ಸಂತೃಪ್ತಿಗೆ ಬೆಲೆಕಟ್ಟಲಾಗದು ಎಂದ ಅವರು ನಿನ್ನೆಗಿಂತ ಉತ್ತಮರಾಗಬೇಕು ಎಂಬ ಶ್ರೇಷ್ಠ ಸವಾಲು ನಮ್ಮದಾಗಬೇಕು. ನಿರಂತರ ಚಿಂತನೆಗಳಿಂದ ಹೊಸತನ ಪಡೆದುಕೊಂಡು ಕರ್ತವ್ಯದಲ್ಲಿ ಮಾನವೀಯತೆ, ಶಿಕ್ಷಣದಿಂದ ಪಡೆದ ಜ್ಞಾನ ಮತ್ತು ಕೌಶಲ, ತಂತ್ರಜ್ಞಾನವನ್ನು ಸಮಾಜದ ಹಿತಕ್ಕಾಗಿ, ಸಮಸ್ಯೆಗಳ ಪರಿಹಾರಕ್ಕಾಗಿ ಬಳಸಿಕೊಳ್ಳುವ ಮನೋಭಾವ ನಮ್ಮೆಲ್ಲರದ್ದಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಭೌತ ಶಾಸ್ತ್ರ ವಿಭಾಗ ಮುಖ್ಯಸ್ಥ ವಿಶ್ವೇಶ್ವರ ಉಪಾಧ್ಯಾಯ, ಗಣಿತ ವಿಭಾಗ ಮುಖ್ಯಸ್ಥ ಪಿ. ಗುರುಪ್ರಸಾದ್ ಉಪಾಧ್ಯ ಉಪಸ್ಥಿತರಿದ್ದರು. ಕೆಮಿಸ್ಟ್ರಿ ವಿಭಾಗ ಮುಖ್ಯಸ್ಥ ಡಾ. ಎನ್.ದಾಮೋದರ ಸ್ವಾಗತಿಸಿದರು. ಆಡಳಿತಾಧಿಕಾರಿ ಎಂ.ಗಣೇಶ್ ಕಾಮತ್ ಅತಿಥಿಯವರನ್ನು ಪರಿಚಯಿಸಿದರು.

ಸ್ಪೆಕ್ಟ್ರಮ್ನ ಅಧ್ಯಕ್ಷ ಅನಂತ ಪೈ ಸಂಘಟನೆಯ ಪದಾಧಿಕಾರಿಗಳು, ಚಟುವಟಿಕೆಗಳ ಕುರಿತು ವಿವರಿಸಿದರು. ಉಪಾಧ್ಯಕ್ಷೆ ರಚನಾ ಪೈ ವಂದಿಸಿದರು. ಉಪನ್ಯಾಸಕಿ ಆಶಿತಾ ಕೆ. ಕಾರ್ಯಕ್ರಮ ನಿರೂಪಿಸಿದರು.

Comments are closed.