ಕರಾವಳಿ

ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ವರದಿ ವಿಳಂಭ ಆರೋಪ : ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಸೂಚನೆ

Pinterest LinkedIn Tumblr

ಮಂಗಳೂರು : ವೆನ್ಲಾಕ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ವರದಿ ಬರಲು ವಿಳಂಭವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ರೋಗಿಗಳಿಂದ ತೆಗೆದ ರಕ್ತವನ್ನು ಆಯಾ ದಿನದಂದೇ ಪರೀಕ್ಷೆಗೆ ಕಳುಹಿಸಬೇಕು. ವಿಳಂಭಕ್ಕೆ ಕಾರಣರಾಗುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಕ್ಷಿ ಶಾಂತಿಗೋಡು ಅವರು ವೆನ್ಲಾಕ್ ಅಧೀಕ್ಷಕರಿಗೆ ತಿಳಿಸಿದರು.

ಅವರು ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೆನ್ಲಾಕ್ ಆಸ್ಪತ್ರೆಯ ಉನ್ನತ ಜವಾಬ್ದಾರಿಗೆ ಜಂಟೀ ನಿರ್ದೇಶಕರ ಹುದ್ದೆಯನ್ನು ಸೃಷ್ಟಿಸಿ ರಾಜ್ಯ ಸರಕಾರ ಮಂಜೂರು ಮಾಡಿದೆ. ಆದರೆ, ಸದರೀ ಹುದ್ದೆಗೆ ಇನ್ನೂ ಅಧಿಕಾರಿಗಳು ನೇಮಕಗೊಳ್ಳದಿರುವ ಕುರಿತು ಅಧ್ಯಕ್ಷರು ಪ್ರಶ್ನಿಸಿದರು.

ಡಾ. ರಾಜೇಶ್ವರಿದೇವಿ

ಇದಕ್ಕೆ ಪ್ರತಿಕ್ರಿಯಿಸಿದ ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿದೇವಿ, ಜಂಟೀ ನಿರ್ದೇಶಕರಿಗೆ ಅಧಿಕಾರ ಹಸ್ತಾಂತರಿಸಲು ತನಗೆ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಅಲ್ಲದೇ, ಈ ಹುದ್ದೆಯನ್ನು ರಾಜ್ಯ ಸರಕಾರ ಬೆಂಗಳೂರು ಮಹಾನಗರಪಾಲಿಕೆಗೆ ವರ್ಗಾಯಿಸಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಪರಿಚಾರಕರೊಂದಿಗೆ ಆಸ್ಪತ್ರೆ ಸಿಬ್ಬಂದಿಗಳು ಸೌಜನ್ಯ ರೀತಿಯಲ್ಲಿ ವರ್ತಿಸದಿರುವ ಬಗ್ಗೆ ನಿರಂತರ ದೂರುಗಳು ಬರುತ್ತಿವೆ. ಈ ಬಗ್ಗೆ ಸಿಬ್ಬಂದಿಗಳಿಗೆ ಸೂಕ್ತ ತಿಳುವಳಿಕೆ ನೀಡಲು ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಯು.ಪಿ. ಇಬ್ರಾಹಿಂ, ಅನಿತಾ ಹೇಮನಾಥ ಶೆಟ್ಟಿ, ಜನಾರ್ಧನ ಗೌಡ ಮತ್ತಿತರರು ಇದ್ದರು.

Comments are closed.