ಕರಾವಳಿ

ಸುರತ್ಕಲ್ : ಅನೈತಿಕ ಚಟುವಟಿಕೆ ತಾಣಕ್ಕೆ ಪೊಲೀಸ್ ದಾಳಿ – ಓರ್ವ ಸೆರೆ – ಮೂವರು ಯುವತಿಯರ ರಕ್ಷಣೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.09: ಸುರತ್ಕಲ್ ಸಮೀಪದ ಇಡ್ಯಾದ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ತಾಣಕ್ಕೆ ಸುರತ್ಕಲ್ ಪೊಲೀಸರ ತಂಡ ದಾಳಿ ನಡೆಸಿ ಮೂವರು ಯುವತಿಯರನ್ನು ರಕ್ಷಿಸಿದ್ದು, ಓರ್ವನನ್ನು ವಾಹನ ಸಮೇತ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪುನೀತ್ ಕುಮಾರ್ ಎಂದು ಹೆಸರಿಸಲಾಗಿದೆ.

ದಿನಾಂಕ 08/12/2018 ರಂದು ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ಕಬ್ಬಲರಾಜರವರಿಗೆ ಸುರತ್ಕಲ್ ಠಾಣಾ ಸರಹದ್ದಿನ ಇಡ್ಯಾ ಗ್ರಾಮದ ಶ್ರೀ ಮಹಾಲಕ್ಷ್ಮೀ ಕೃಪಾ ಕಾಂಪ್ಲೇಕ್ಸ್ ಕಟ್ಟಡದ ಬಳಿ ಮನೆಯೊಂದರಲ್ಲಿ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆ ಬಳಸುತ್ತಿರುವುದಾಗಿ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಿಸಿಬಿ ಘಟಕದ ಪಿಎಸೈ ಕಬ್ಬಲರಾಜ್ ಹಾಗೂ ಸಿಬ್ಬಂದಿಗಳಾದ ಸೀನಪ್ಪ, ಸುಬ್ರಮಣ್ಯ. ರಾಜ ಎಂ, ಆಶಿತ್ ವಿಶಾಲ್ ಡಿಸೋಜಾ ಮತ್ತು ಸುರತ್ಕಲ್ ಠಾಣಾ ಪೊಲೀಸ್ ನಿರೀಕ್ಷಕ ರಾಮಕೃಷ್ಣ ಕೆ.ಜಿ ಮತ್ತು ಪಿಎಸ‌ಐ ರವರೊಂದಿಗೆ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮೂರು ಯುವತಿಯರು ಹಾಗೂ ಇಬ್ಬರೂ ಗಿರಾಕಿಗಳು ಇದ್ದು ಅವರನ್ನು ವಿಚಾರಣೆ ಮಾಡಿದ ಸಂದರ್ಭದಲ್ಲಿ ಆರೋಪಿ ಪುನೀತ್ ಕುಮಾರ್ ನಮ್ಮನ್ನು ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಕರೆಸಿರುವುದಾಗಿ ಯುವತಿಯರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಪುನೀತ್ ಕುಮಾರ್‌ನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ 51,450 ರೂ. ನಗದು, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸುರೇಶ್ ಟಿ.ಆರ್., ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಹಾಗೂ ಎಸಿಪಿ ಮಂಜುನಾಥ ಶೆಟ್ಟಿ ಮಾರ್ಗದರ್ಶನದಂತೆ ದಾಳಿ ನಡೆಸಲಾಗಿತ್ತು

Comments are closed.