ಕರಾವಳಿ

ಪೋಕ್ಸೋ ಪ್ರಕರಣದ ಆರೋಪಿಗೆ ಉಡುಪಿ ನ್ಯಾಯಾಲಯದಿಂದ ಜಾಮೀನು

Pinterest LinkedIn Tumblr

ಉಡುಪಿ: ಅಪ್ರಾಪ್ತೆಯನ್ನು ಪ್ರೀತಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿ ಮಗು ಕರುಣಿಸಿದ ಆರೋಪದಡಿಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ಕಳೆದ ನಾಲ್ಕೂವರೆ ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿ ತಲ್ಲೂರು ಸಮೀಪದ ನಿವಾಸಿ ಉದಯ್ ಎಂಬಾತನಿಗೆ ಉಡುಪಿಯ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಇಲ್ಲಿನ ನ್ಯಾಯಾಧೀಶರಾದ ಟಿ. ವೆಂಕಟೇಶ ನಾಯ್ಕ್ ಈ ಶರತ್ತು ಬದ್ಧ ಜಾಮೀನು ನೀಡಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಆರೋಪಿಯು ಅಪ್ರಾಪ್ತ ಯುವತಿಯನ್ನು ಪ್ರೀತಿಸಿದ್ದು ಇಬ್ಬರ ನಡುವೆ ಸಲುಗೆ ಬೆಳೆದು ದೈಹಿಕ ಸಂಪರ್ಕ ಬೆಳೆಸಿದ್ದರು. ಇದರಿಂದಾ ಆಕೆ ಗರ್ಭವತಿಯಾಗಿದ್ದು ಇಬ್ಬರು ಬೆಂಗಳೂರಿಗೆ ಕಳೆದ ವರ್ಷ ಮಳೆಗಾಲದಲ್ಲಿ ತೆರಳಿ ಅಲ್ಲಿ ನೆಲೆಸಿದ್ದರು. ಆ ನಂತರ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು ಇತ್ತ ಕಡೆ ಯುವತಿ ತಾಯಿ ಆರೋಪಿ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದರು. ಜುಲೈ ತಿಂಗಳಿನಲ್ಲಿ ಯುವತಿ ಮಗುವಿನೊಂದಿಗೆ ಮನೆಗೆ ಬಂದಿದ್ದು ಪೊಲೀಸ್ ಠಾಣೆಯಲ್ಲಿ ತಾನು ಇಚ್ಚೆಯೊಂದಿಗೆ ಉದಯನೊಂದಿಗೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಳು. ಆದರೆ ಆಕೆ ಅಪ್ರಾಪ್ತೆಯಾದ ಕಾರಣ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ಹಿನ್ನೆಲೆ ಪೊಲಿಸರು ಉದಯನನ್ನು ಬಂಧಿಸಿದ್ದರು. ಉದಯ್ ಮೇಲೆ ಐಪಿಸಿ ಕಲಂ 366(ಎ) ಮತ್ತು 376 (1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಆರೋಪಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಶರ್ತಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.

ಆರೋಪಿ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.

Comments are closed.