ಕರಾವಳಿ

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿದ ಸಚಿವೆ ಡಾ. ಜಯಮಾಲಾ

Pinterest LinkedIn Tumblr

ಉಡುಪಿ: ಸಾಮಾಜಿಕ, ಸಾಂಸ್ಥಿಕ ನ್ಯಾಯದ ಆಧಾರದ ಮೇಲೆ ಈ ಬಾರಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಸುಮಾರು 2,000ಕ್ಕೂ ಅಧಿಕ ಸಾಧಕರಲ್ಲಿ 63 ಮಂದಿಯ ಆಯ್ಕೆ ಮಾಡಲಾಗಿದೆ. ಸಮಾಜ, ತಮ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿದ ಇಂತಹ ಮಹಾನ್ ಸಾಧಕರ ಬದುಕು ಉಳಿದವರಿಗೆ ಮಾದರಿಯಾಗಬೇಕೆನ್ನುವ ಉದ್ದೇಶದಿಂದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಚಿವೆ ಡಾ. ಜಯಮಾಲಾ ಹೇಳಿದರು.

ಅವರು ಮಣಿಪಾಲ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸಮ್ಮಾನಿಸಿ ಮಾತನಾಡಿದರು.

ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ವಿಶಿಷ್ಟವಾದದ್ದು. 7 ವರ್ಷಗಳಿಂದ ಮಗುವಿನಿಂದ ತೊಡಗಿ 94 ವರ್ಷದ ಹಿರಿಯರವರೆಗಿನ 32 ಪ್ರತಿಭಾನ್ವಿತರನ್ನು ಗೌರವಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ವಾಗತಿಸಿ, ಶಿಕ್ಷಕ ಪ್ರಶಾಂತ್‌ ಶೆಟ್ಟಿ ಹಾವಂಜೆ ನಿರೂಪಿಸಿದರು. ವಾರ್ತಾಧಿಕಾರಿ ಖಾದರ್‌ ವಂದಿಸಿದರು.

Comments are closed.