ಕರಾವಳಿ

ಗೋಕರ್ಣ ದೇವಸ್ಥಾನವನ್ನು ಸ್ವಾಧೀನಕ್ಕೆ ಪಡೆದ ಸರಕಾರ; ತುರ್ತು ವಿಚಾರಣೆಗೆ ಸುಪ್ರೀಂ ನಕಾರ

Pinterest LinkedIn Tumblr


ಕುಮಟಾ/ ಬೆಂಗಳೂರು : ರಾಮಚಂದ್ರಾಪುರ ಮಠದ ಅಧೀನಕ್ಕೆ ನೀಡಲಾಗಿದ್ದ ಪುರಾಣ ಪ್ರಸಿದ್ಧ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಸರ್ಕಾರ ಹೈಕೋರ್ಟ್‌ ಆದೇಶದಂತೆ ಬುಧವಾರ ಸ್ವಾಧೀನಕ್ಕೆ ತೆಗೆದುಕೊಂಡಿದೆ.

ಬಿಗಿ ಪೊಲೀಸ್‌ ಬಂದೋಬಸ್ತಿನಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅಧ್ಯಕ್ಷತೆಯ ಉಸ್ತುವಾರಿ ಸಮಿತಿ ದೇವಾಲಯದ ಚರ ಹಾಗೂ ಸ್ಥಿರ ಆಸ್ತಿ, ವ್ಯವಹಾರವನ್ನು ತನ್ನ ಸುಪರ್ದಿಗೆ ವಹಿಸಿಕೊಂಡಿದೆ.

ಸೆ. 10ರಿಂದಲೇ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯಲು ಹೈಕೋರ್ಟ್‌ ಸೂಚಿಸಿತ್ತು. ಆದರೆ, ಈ ಮಧ್ಯೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ನೀಡಿದೆ ಎಂಬ ಗೊಂದಲದಿಂದ ಕ್ರಮ ಕೈಗೊಂಡಿರಲಿಲ್ಲ. ಇದೀಗ ಗೊಂದಲ ನಿವಾರಣೆಯಾಗಿ ದೇವಸ್ಥಾನವನ್ನು ಇಲಾಖೆ ವಶಕ್ಕೆ ಪಡೆಯಲಾಗಿದೆ. ಸುಪ್ರೀಂ ಕೋರ್ಟ್‌ ಮುಂದೆ ಯಾವ ಆದೇಶ ಹೊರಡಿಸುತ್ತದೆಯೋ ಅದರಂತೆ ಇಲಾಖೆ ಮುಂದುವರಿಯಲಿದೆ. ಸದ್ಯ ದೇವಸ್ಥಾನ ನಮ್ಮ ವಶದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಮರಳಿ ಸರ್ಕಾರದ ವಶಕ್ಕೆ ನೀಡಿದ ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ಕೋರಿ ರಾಮಚಂದ್ರಾಪುರ ಮಠ ಸಲ್ಲಿಸಿದ್ದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಬುಧವಾರ ನಿರಾಕರಿಸಿದೆ.

ಹೈಕೋರ್ಟ್‌ ಆದೇಶದಂತೆ ಸರ್ಕಾರ ಬುಧವಾರ ಗೋಕರ್ಣ ದೇವಸ್ಥಾನವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾದ ಹಿನ್ನೆಲೆಯಲ್ಲಿ, ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡುವಂತೆ ಮಠದ ಪರ ವಕೀಲರು ಮುಖ್ಯ ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ಪೀಠವನ್ನು ಕೋರಿದರು. ಆದರೆ, ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ, ಒಂದು ವಾರದ ಬಳಿಕ ಬನ್ನಿ ಎಂದು ಮೌಖೀಕವಾಗಿ ಸೂಚಿಸಿ ವಿಚಾರಣೆ ಮುಂದೂಡಿತು.

Comments are closed.