ಕರಾವಳಿ

ಮಂಗಳೂರಿನಲ್ಲಿ ಬಂದ್ ಯಶಸ್ವಿ : ಹಲವೆಡೆ ಬಸ್ಸಗಳಿಗೆ ಕಲ್ಲು ತೂರಾಟ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್ .10 : ಗ್ಯಾಸ್, ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆ ವಿರುದ್ಧ ದೇಶದಾದ್ಯಂತ ಇಂದು ಕಾಂಗ್ರೆಸ್ ಪಕ್ಷ ನೀಡಿರುವ ಭಾರತ ಬಂದ್‌ಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಖಾಸಗಿ ಹಾಗೂ ಸರಕಾರಿ ಬಸ್‌ಗಳು ರಸ್ತೆಗಿಳಿಯದೆ ಬಂದ್‌ಗೆ ಪೂರಕವಾಗಿ ಸ್ಪಂದಿಸಿವೆ. ಕೆಲವು ಖಾಸಗಿ ವಾಹನಗಳು ಮಾತ್ರ ರಸ್ತೆಗಿಳಿದಿವೆ. ಕೆಲವೊಂದು ಅಂಗಡಿಮುಂಗಟ್ಟುಗಳು ಮಾತ್ರ ತೆರೆದಿವೆ.

ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಖಾಸಗಿ ಬಸ್ಸೊಂದಕ್ಕೆ ಹಾಗೂ ಬಂಟ್ವಾಳದಲ್ಲಿ ಎರಡು ಕೆಎಸ್ಸಾರ್ಟಿಸಿ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ವರದಿಯಾಗಿದೆ.

ಈ ನಡುವೆ ಮಂಗಳೂರಿನ ಪಂಪ್‌ವೆಲ್, ಜ್ಯೋತಿ ಸರ್ಕಲ್, ಬಂಟ್ವಾಳ ತಾಲೂಕಿನ ಕಲ್ಲಡ್ಕ, ಬಿ.ಸಿ.ರೋಡ್, ಮಾಣಿ, ತುಂಬೆ, ಜಕ್ರಿಬೆಟ್ಟು ಹಾಗೂ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ಬಂದ್ ಬೆಂಬಲಿಗರು ಟಯರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಖಾಸಗಿ ಮತ್ತು ಸರಕಾರಿ ಬಸ್‌ಗಳೆಲ್ಲ ನಿಲ್ದಾಣಗಳಲ್ಲಿ ಠಿಕಾಣಿ ಹೂಡಿವೆ.

ಎಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನಲ್ಲಿ ರಸ್ತೆ ತಡೆಗೆ ಮುಂದಾದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿಯಲ್ಲೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
_vb

Comments are closed.