ಕರಾವಳಿ

ಮತದಾನದ ಜಾಗೃತಿ ಮೂಡಿಸಲು ರಂಗುರಂಗಿನ ರಂಗೋಲಿ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 100% ಮತದಾನ ನಡೆಯುವ ಕುರಿತಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.

ಅವರು ಭಾನುವಾರ ಉಡುಪಿ ಬಿಗ್ ಬಜಾರ್ ಎದುರುಗಡೆ , ಜಿಲ್ಲೆಯಲ್ಲಿ ಮತದಾನದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯನ್ನು ವೀಕ್ಷಿಸಿ ಮಾತನಾಡಿದರು.

ಚುನಾವಣೆಯಲ್ಲಿ ಪ್ರತಿಯೊಬ್ಬರನ್ನೂ ಪಾಲ್ಗೊಳ್ಳುವಂತೆ ಮಾಡಲು , ಪುರುಷರು, ಮಹಿಳೆಯರು , ಲಿಂಗತ್ವ ಅಲ್ಪ ಸಂಖ್ಯಾತರು , ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು, ವಿಶೇಷ ಚೇತನರು, ವಾಕ್, ಶ್ರವಣ, ದೃಷ್ಠಿ ದೋಷವುಳ್ಳವರು, , ಹಿರಿಯ ನಾಗರೀಕರು ಎಲ್ಲರಿಗೂ ವಿಶೇಷ ಕಾರ್ಯಕ್ರಮಗಳ ಮೂಲಕ ಮತದಾನದ ಕುರಿತು ಅರಿವು ಮೂಡಿಸಲಾಗುತ್ತಿದ್ದು, ಈ ಮೂಲಕ 100% ಮತದಾನದ ಗುರಿ ಹೊಂದಲಾಗಿದೆ ಎಂದು ಕಾಪಶಿ ಹೇಳಿದರು.

ಪ್ರತಿಯೊಬ್ಬ ಮತದಾರರು ಯಾವುದೇ ಆಸೆ,ಆಮಿಷ, ಒತ್ತಡ , ಪ್ರಲೋಬನೆಗಳಿಗೆ ಒಳಗಾಗದೇ, ತಮ್ಮ ಸ್ವಂತ ವಿವೇಚನೆಯನ್ನು ಬಳಸಿ ಯೋಗ್ಯ ಅಭ್ಯರ್ಥಿಗೆ ಮತದಾನ ಮಾಡಿ ಎಂದು ಕಾಪಶಿ ಹೇಳಿದರು.
ಸಾರ್ವಜನಿಕರು ರಚಿಸಿದ ಮತದಾನದ ಜಾಗೃತಿ ಸಂದೇಶವನ್ನು ಬಿಂಬಿಸುವ ರಂಗೋಲಿಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಪೌರಾಯುಕ್ತ ಜನಾರ್ಧನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಜಿಲ್ಲಾ ವಿಕಲಚೇತನ ಇಲಾಖೆ ಅಧಿಕಾರಿ ನಿರಂಜನ ಭಟ್ , ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ, ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Comments are closed.