ಕರಾವಳಿ

ಮೇಯರ್ ಅಯ್ಕೆ ಪ್ರಕ್ರಿಯೆ ಅಂತ್ಯ : ಭಾಸ್ಕರ ಮೊಯ್ಲಿ ಅವರಿಗೆ ಈ ಬಾರಿಯ ಮೇಯರ್ ಪಟ್ಟ

Pinterest LinkedIn Tumblr

ಮಂಗಳೂರು, ಮಾರ್ಚ್.8: ಮಹಾನಗರ ಪಾಲಿಕೆಯ ಮುಂದಿನ ಸಾಲಿನ ಮೇಯರ್ ಹುದ್ದೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಗೊಂದಲ ಕೊನೆಗೂ ಮುಕ್ತಾಯ ಕಂಡಿದ್ದು, ಹಿರಿಯ ಕಾರ್ಪೊರೇಟರ್ ಭಾಸ್ಕರ ಮೊಯ್ಲಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಉಪ ಮೇಯರ್ ಹುದ್ದೆಗೆ ಅಭ್ಯರ್ಥಿಯಾಗಿ ಮುಹಮ್ಮದ್ ಕುಂಜತ್ತಬೈಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಇಂದು ಬೆಳಗ್ಗೆ 7 ಗಂಟೆಯಿಂದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾರ್ಪೊರೇಟರ್ಗಳನ್ನು ಹೊರಗಿಟ್ಟು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೊಯ್ದಿನ್ ಬಾವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತ್ರ ಭಾಗವಹಿಸಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಭಾಸ್ಕರ ಮೊಯ್ಲಿ ಅವರ ಹೆಸರನ್ನು ಅಭ್ಯರ್ಥಿಯನ್ನಾಗಿ ತೀರ್ಮಾನಿಸಲಾಯಿತು.

ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಕಗ್ಗಂಟಾಗಿದ್ದ ಮೇಯರ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ತೆರೆಬಿದ್ದಿದೆ. ನಿರೀಕ್ಷೆಯಂತೆ ಮೇಯರ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ, ಸಚಿವ ರಮಾನಾಥ ರೈ ಅವರ ಬೆಂಬಲ ಹೊಂದಿದ್ದ ಭಾಸ್ಕರ ಮೊಯ್ಲಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಉಪ ಮೇಯರ್ ಅಭ್ಯರ್ಥಿಯಾಗಿ ಮುಹಮ್ಮದ್ ಕುಂಜತ್ತಬೈಲ್ ಆಯ್ಕೆಯಾಗಿದ್ದಾರೆ.

Comments are closed.