ಕರಾವಳಿ

ಕಸಬಾ ಬೆಂಗರೆ ಗಲಾಭೆ ಪ್ರಕರಣ : 10 ಮಂದಿಯ ಬಂಧನ

Pinterest LinkedIn Tumblr

ಮಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಉಪ್ಸಸ್ಥಿತಿಯಲ್ಲಿ ಮಲ್ಪೆಯಲ್ಲಿ ನಡೆದ ಮೀನುಗಾರರ ಸಮಾವೇಶ ಮುಗಿಸಿ ವಾಪಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರಿದ್ದ ಬಸ್ ಮೇಲೆ ಬೆಂಗರೆಯಲ್ಲಿ ಮಂಗಳವಾರ ತಡರಾತ್ರಿ ದುಷ್ಕರ್ಮಿಗಳ ತಂಡದಿಂದ ನಡೆದ ದಾಳಿ ಹಾಗೂ ತದನಂತರ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ 10 ಮಂದಿಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಂಗಳವಾರ ಮಲ್ಪೆಯಲ್ಲಿ ನಡೆದ ಮೀನುಗಾರರ ಸಮಾವೇಶ ಮುಗಿಸಿ ಮಂಗಳವಾರ ರಾತ್ರಿ ವಾಪಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಸ್ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡದಿಂದ ಹಲ್ಲೆ ನಡೆದಿದೆ. ಕಸಬಾ ಬೆಂಗರೆಯಲ್ಲಿ 5ನೇ ಬಸ್ಸಿಗೆ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅಡ್ಡಗಟ್ಟಿ ತಗಾದೆ ನಡೆಸಿದ್ದು, ಬಸ್‌ನಲ್ಲಿದ್ದವರ ಮೇಲೆ ಚೂರಿಯಿಂದ ಹಲ್ಲೆ ನಡೆಸಲಾದ ಬಗ್ಗೆ ದೂರು ದಾಖಲಾಗಿತ್ತು.

ಇದೇ ಸಂದರ್ಭ ವಾಗ್ವಾದದ ವಿಚಾರ ತೋಟ ಬೆಂಗರೆಗೆ ತಿಳಿದು ಅಲ್ಲಿಂದ ಜನ ಜಮಾಯಿಸಿದ್ದರು. ಕಸಬಾ ಬೆಂಗರೆಯಲ್ಲಿ ಕೂಡ ತಪ್ಪು ಮಾಹಿತಿ ರವಾನೆಯಾಗಿ ಇಲ್ಲಿಯೂ ಜನರು ಸೇರಿದ್ದರು. ಎರಡು ಕಡೆಯಿಂದಲೂ ಜನರು ಸೇರಿ ಕಲ್ಲು ತೂರಾಟ ನಡೆದು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡರು. ನಾಲ್ಕು ಮಂದಿ ಆಸ್ಪತ್ರೆಗೂ ದಾಖಲಾಗಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಪಡೆಗಳನ್ನು ಕರೆಸಿ ಗುಂಪನ್ನು ಲಾಠಿ ಚಾರ್ಜ್‌ ನಡೆಸಿ ಚದುರಿಸಲಾಗಿತ್ತು.

ಬಳಿಕ ತಡರಾತ್ರಿ ತೋಟಬೆಂಗರೆಯಲ್ಲಿ ಮನೆಯೊಂದಕ್ಕೆ ಹಾನಿ ಮಾಡಲಾಗಿತ್ತು. ಘಟನೆಯ ಬಗ್ಗೆ ಪಣಂಬೂರು ಠಾಣೆಯಲ್ಲಿ ಇತ್ತಂಡ ಕೇಸು ದಾಖಲಿಸಿದ್ದಲ್ಲದೆ, ಪೊಲೀಸರ ಮೇಲಿನ ಹಲ್ಲೆಗೆ ಸ್ವಯಂ ಪ್ರಕರಣವೂ ದಾಖಲಾಗಿದೆ.

ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈಗಾಗಲೇ 10ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

Comments are closed.