ಕರಾವಳಿ

ಕರಾವಳಿಯ ಜಾನಪದ ಕ್ರೀಡೆ ಕಂಬಳ ಮಸೂದೆಗೆ ರಾಷ್ಟ್ರಪತಿ ಅಂಕಿತ : ಕಂಬಳ ಪ್ರಿಯರು ನಿರಾಳ

Pinterest LinkedIn Tumblr

ಮಂಗಳೂರು, ಫೆಬ್ರವರಿ.20: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಕೊನೆಗೂ ರಾಷ್ಟ್ರಪತಿ ಅಂಕಿತ ಸಿಕ್ಕಿದೆ. ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಕಳಿಸಿದ್ದ ಮಸೂದೆಗೆ ಏಳು ತಿಂಗಳ ಬಳಿಕ ರಾಷ್ಟ್ರಪತಿಗಳಿಂದ ಅಂಕಿತ ಹಾಕಿದ್ದಾರೆ. ಇನ್ನು ರಾಜ್ಯ ಸರ್ಕಾರ ಅಧ್ಯಾದೇಶ ಹೊರಡಿಸುವುದಷ್ಟೇ ಬಾಕಿಯಿದೆ. ಈ ಮೂಲಕ ಕರಾವಳಿಯ ಕಂಬಳ ಪ್ರಿಯರು ಸಹಜವಾಗಿಯೇ ಸಂತಸಗೊಂಡಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಕಳಿಸಿದ್ದ ತಿದ್ದುಪಡಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಮಾಡಿದ್ದು, ಕಂಬಳಕ್ಕೆ ಇದ್ದ ಅಡ್ಡಿ ದೂರವಾಗಿದೆ.

ಪ್ರಕರಣದ ಬಗ್ಗೆ…

ಪ್ರಾಣಿದಯಾ ಸಂಘ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಹಿನ್ನೆಲೆ ಕಂಬಳಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಇದರ ವಿರುದ್ಧವಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಮಂಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದರು. ಸುಗ್ರಿವಾಜ್ಞೆ ಅವಧಿ ಮುಗಿದ ಕಾರಣ ಈ ವರ್ಷ ಕಂಬಳಕ್ಕೆ ಅನುಮತಿ ನೀಡಬಾರದು ಎಂದು ಪೇಟಾ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿತ್ತು.

ವಿಚಾರಣೆ ವೇಳೆ ರಾಜ್ಯದ ಪರ ವಕೀಲರು ಮಸೂದೆ ಅಂಗೀಕಾರವಾಗಿದ್ದು, ರಾಷ್ಟ್ರೀಪತಿಗಳ ಅಂಕಿತ ಬೀಳಲು ಬಾಕಿಯೆ ಎಂದು ವಾದಿಸಿದ್ದರು. ಸರ್ಕಾರದ ವಾದವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಕಂಬಳ ಕ್ರೀಡೆಗೆ ತಡೆ ನೀಡಲು ನಿರಾಕರಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಎಂ.ಕನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ದ್ವಿಸದಸ್ಯ ಪೀಠ ಸುಪ್ರೀಂ ಕೋರ್ಟ್ ಮಾರ್ಚ್ 14ಕ್ಕೆ ಮುಂದೂಡಿತ್ತು.

ಗೌರವಾನ್ವಿತ ರಾಷ್ಟ್ರಪತಿಗಳು ತಮ್ಮ ಬಳಿ ಇದ್ದ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಮಸೂದೆಗೆ ಅಂಕಿತ ಹಾಕಿದಕ್ಕಾಗಿ ಪ್ರೀತಿಯ ಸೊಲ್ಮೆಲು. ಇದರಿಂದ ಈವರೆಗೆ ಕಂಬಳಕ್ಕೆಇದ್ದ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಇದಕ್ಕೆ ಸಂಭಂದಿಸಿದ ಸುತ್ತೋಲೆ ಈಗಾಗಲೇ ರಾಜ್ಯ ಸರಕಾರಕ್ಕೆ ರವಾನೆಯಾಗಿದೆ.

ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದ ಗೌಡ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

Comments are closed.