ಉಳ್ಳಾಲ, ಫೆಬ್ರವರಿ,17 : ಕಾಲೇಜಿಗೆ ತೆರಳಲು ತಲಪಾಡಿ ಜಂಕ್ಷನ್ ಬಸ್ಸು ನಿಲ್ದಾಣದಲ್ಲಿ ನಗರ ಸಾರಿಗೆ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪೊಂದು ಎಳೆದಾಕಿ ಬಾಟಲಿ ,ಕೈಗಳಿಂದ ಹಲ್ಲೆ ನಡೆಸಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಮಂಜೇಶ್ವರ ಕುಂಜತ್ತೂರು ನಿವಾಸಿಗಳಾದ ಫೈಝಿಲ್(17)ಮತ್ತು ಅಹಮ್ಮದ್ ಇಮ್ರಾನ್(17 ಎಂದು ಗುರುತಿಸಲಾಗಿದೆ. ಘಟನೆಯಿಇಂದ ಗಂಭೀರವಾಗಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
ಇವರಿಬ್ಬರು ನಗರದ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಶನಿವಾರ ಕಾಲೇಜಿಗೆ ಹೋಗಲೆಂದು ತಲಪಾಡಿ ಜಂಕ್ಷನ್ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ತಂಡವೊಂದು ಇವರ ಮೇಲೆ ಹಲ್ಲೆ ನಡೆಸಿದೆ. ಶುಕ್ರವಾರ ಸಂಜೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಸೀಟು ಬಿಟ್ಟು ಕೊಡುವ ವಿಚಾರದಲ್ಲಿ ಉಂಟಾಗಿದ್ದ ವಾಗ್ವಾದದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.