ಕರಾವಳಿ

ಬಾಲಕಿ ಅತ್ಯಾಚಾರ ಯತ್ನ ಪ್ರಕರಣ – ಪೊಲೀಸರಿಂದ ಆರೋಪಿಯ ರಕ್ಷಣೆ : ಹಿಂಪ, ಬಜರಂಗದಳ ಆಕ್ರೋಷ

Pinterest LinkedIn Tumblr

ಮಂಗಳೂರು, ಫೆಬ್ರವರಿ 9: ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪುತ್ತೂರು ವಿಭಾಗದ ಕಾರ್ಯಕರ್ತರು ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕಿಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಅವರು ಮಾತನಾಡಿ, ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ 8ನೇ ತರಗತಿಯ ವಿದ್ಯಾರ್ಥಿನಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಆರೋಪಿ ರಿಜೀಶ್ ಎಂಬಾತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಆರೋಪಿಯನ್ನು ಬಂಧಿಸದೆ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಜ.31ರಂದು ವಿದ್ಯಾರ್ಥಿನಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಟೋ ರಿಕ್ಷಾದಲ್ಲಿ ಬಂದ ರಿಜೀಶ್ ಎಂಬಾತ ಧರ್ಮಸ್ಥಳ-ಮುಂಡಾಜೆ ರಸ್ತೆಯ ಕೊಲೆಂಜಿರೋಡಿಯಲ್ಲಿ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬೈಕ್ ಸವಾರರೊಬ್ಬರು ನೋಡಿದ ಕೂಡಲೇ ರಿಜೀಶ್ ಪರಾರಿಯಾಗಿದ್ದಾನೆ. ಈ ಬಗ್ಗೆ ಬಾಲಕಿ ತನ್ನ ಹೆತ್ತವರಲ್ಲಿ ಹೇಳಿಕೊಂಡಿದ್ದಾಳೆ ಎಂದರು.

ಘಟನೆಗೆ ಸಂಬಂಧಿಸಿ ದೂರು ನೀಡಲು ಹೋದಾಗ ಸಂಬಂಧಪಟ್ಟ ಠಾಣೆ ಎಸ್‌ಐ ಸುಮಾರು ಎರಡು ತಾಸುಗಳ ಕಾಲ ಕಾಯಿಸಿದ್ದಾರೆ. ಘಟನೆಯಲ್ಲಿ ರಿಕ್ಷಾ ಚಾಲಕನನ್ನು ಬಂಧಿಸಿದ್ದರೂ ನಿಜವಾದ ಆರೋಪಿ ರಿಜೀಶ್ನನ್ನು ಪೊಲೀಸರು ಬಂಧಿಸದೆ ಆತನ ರಕ್ಷಣೆಗೆ ಮುಂದಾಗಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಭಾಸ್ಕರ ಧರ್ಮಸ್ಥಳ ಎಚ್ಚರಿಕೆ ನೀಡಿದರು.

ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್ ಮತ್ತು ಬಾಲಕಿಯ ತಂದೆ, ತಾಯಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.