ಕರಾವಳಿ

ದ.ಕ.ಜಿಲ್ಲೆ : ನೂತನ ಎಸ್‌ಪಿ ಡಾ.ಬಿ.ಆರ್.ರವಿಕಾಂತೇ ಗೌಡ ಅಧಿಕಾರ ಸ್ವೀಕಾರ

Pinterest LinkedIn Tumblr

ಮಂಗಳೂರು, ಜನವರಿ.29: ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಯಾಗಿ ನೇಮಕಗೊಂಡ ಡಾ.ಬಿ.ಆರ್.ರವಿಕಾಂತೇ ಗೌಡ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಜೆ. ಸಜಿತ್ ಅವರು ರವಿಕಾಂತೇ ಗೌಡರಿಗೆ ಅಧಿಕಾರ ಹಸ್ತಾಂತರ ಮಾಡಿದರು. 2017ರ ಜೂನ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿದ್ದ ಸುಧೀರ್ ಕುಮಾರ್ ರೆಡ್ಡಿಯವರನ್ನು ಬೆಳಗಾವಿಗೆ ವರ್ಗಾವಣೆ ಮಾಡಿ ಜ.20ರಂದು ಸರಕಾರ ಆದೇಶ ಹೊರಡಿಸಿತ್ತು. ತೆರವಾದ ಸ್ಥಾನಕ್ಕೆ ಮಂಡ್ಯದ ಐಪಿಎಸ್ ಅಧಿಕಾರಿಯಾಗಿರುವ ಬಿ.ಆರ್.ರವಿಕಾಂತೇ ಗೌಡರನ್ನು ನಿಯೋಜಿಸಲಾಗಿತ್ತು. ರವಿಕಾಂತೇ ಗೌಡ ಇದಕ್ಕೂ ಮೊದಲು ಬೆಳಗಾವಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮೂಲತ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರ ಹಳ್ಳಿಯವರಾದ ಡಾ. ಬಿ.ಆರ್. ರವಿಕಾಂತೇ ಗೌಡ, ಪ್ರಸಿದ್ಧ ಬರಹಗಾರ ಬೆಸಗರಹಳ್ಳಿ ರಾಮಣ್ಣರ ಪುತ್ರರಾಗಿದ್ದು, ‘ಎನ್ಕೌಂಟರ್ ಸ್ಪೆಷಲಿಸ್ಟ್’ ಎಂದೇ ಗುರುತಿಸಲ್ಪಟ್ಟವರು. ಅವರು ಬಿಇ (ಮೆಕ್ಯಾನಿಕಲ್) ಹಾಗೂ ಎಂಟೆಕ್ (ಪ್ರೊಡಕ್ಷನ್ ಇಂಜನಿಯರಿಂಗ್ ಸಿಸ್ಟಮ್ಸ್ ಟೆಕ್ನಾಲಜಿ) ಪದವೀಧರರಾಗಿದ್ದಾರೆ.

ಸಾಹಿತ್ಯ ಮತ್ತು ಸೃಜನಶೀಲ ಕ್ರಿಯೆಗಳಲ್ಲಿ ಆಸಕ್ತಿ, ಸಂಸ್ಕೃತಿ ಅಧ್ಯನಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ 2015ರಲ್ಲಿ ‘ಕುವೆಂಪು ಸಾಂಸ್ಕತಿಕ ವಿದ್ಯಮಾನ: ಒಂದು ಅಧ್ಯಯನ’ ಎಂಬ ಸಂಶೋಧನಾ ಪ್ರಬಂಧಕ್ಕೆ ಡಿಲಿಟ್ ಪದವಿ ಪಡೆದುಕೊಂಡಿದ್ದಾರೆ.

1997ರ ಕನಾರ್ಟಕ ಪೊಲೀಸ್ ಸೇವೆ (ಕೆಪಿಎಸ್)ಯ ಮೂಲಕ ಪೊಲೀಸ್ ಸೇವೆಗೆ ಸೇರ್ಪಡೆಗೊಂಡಿದ್ದು, 1999ರಲ್ಲಿ ನಂಜನಗೂಡು ಉಪ ವಿಭಾಗದ ಡಿಎಸ್ಪಿಯಾಗಿ, ಬಳಿಕ ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ, ಬೆಂಗಳೂರು ನಗರ ಅಪರಾಧ ವಿಭಾಗದಲ್ಲಿ ಡಿಸಿಪಿಯಾಗಿ, ಬೆಂಗಳೂರು ರಾಜ್ಯ ಗುಪ್ತ ವಾರ್ತೆ ಎಸ್ಪಿಯಾಗಿ, ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ, ಬೆಂಗಳೂರು ನಗರ ಈಶಾನ್ಯ ವಿಭಾಗ ಡಿಸಿಪಿಯಾಗಿ, ಬೆಂಗಳೂರು ನಗರ ಕೇಂದ್ರ ವಿಭಾಗ ಡಿಸಿಪಿಯಾಗಿ ಹಾಗೂ ಕಳೆದ ಸುಮಾರು 3 ವರ್ಷ 4 ತಿಂಗಳು ಕಾಲ ಬೆಳಗಾವಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ರವಿಕಾಂತೇ ಗೌಡ ಅಧಿಕಾರ ವಹಿಸಿಕೊಂಡಿದ್ದಾರೆ.

ಪೊಲೀಸ್ ಇಲಾಖೆಗೆ ಸೇರುವ ಮುನ್ನ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದಯಾನಂದ ಸಾಗರ ಇಂಜನಿಯರಿಂಗ್ ಕಾಲೇಜು, ಬೆಂಗಳೂರು ಯುನಿವರ್ಸಿಟಿ, ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜನಿಯರಿಂಗ್, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವವನ್ನು ಇವರು ಹೊಂದಿದ್ದಾರೆ.

ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತರಿವರು ತಮ್ಮ ಸೇವಾ ಸಾಧನೆಗಾಗಿ 2002 ಹಾಗೂ 2007ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕಗಳನ್ನು ಇವರು ಪಡೆದಿದ್ದಾರೆ.

ಶೀಘ್ರವೇ ರಾಜ್ಯದಲ್ಲಿ ಕನ್ನಡದಲ್ಲಿಯೇ ಕವಾಯತು ಪ್ರಕ್ರಿಯೆ ಆರಂಭ :ಎಸ್‌ಪಿ

ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಎಸ್‌ಪಿಯವರು, ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿರುವ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕವಾಯತು ಅನ್ನು ರಾಜ್ಯಾದ್ಯಂತ ಕನ್ನಡದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ. ಆ ಸಮಿತಿಯಲ್ಲಿ ತಾನೂ ಒಬ್ಬ ಸದಸ್ಯನಾಗಿದ್ದು, ಸಮಿತಿ ಸಭೆಯು ಮುಂದಿನ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಶೀಘ್ರವೇ ರಾಜ್ಯದಲ್ಲಿ ಕನ್ನಡದಲ್ಲಿಯೇ ಕವಾಯತು ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು.

ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕವಾಯತು ಪ್ರಕ್ರಿಯೆಗಳು ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿದ್ದು, ಬೆಳಗಾವಿಯಲ್ಲಿ 2016ರ ಜನವರಿ 26ರಂದು ಈ ಪ್ರಕ್ರಿಯೆಯನ್ನು ಕನ್ನಡದಲ್ಲಿ ಆರಂಭಿಸಲಾಗಿದೆ. ಇದರ ಡಿವಿಡಿ ತಯಾರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ನವೆಂಬರ್ 22ರ 2017ರಂದು ಮುಖ್ಯಮಂತ್ರಿ ಇದನ್ನು ಬಿಡುಗಡೆಗೊಳಿಸಿದ್ದಾರೆ.

ಇದೀಗ ರಾಜ್ಯಾದ್ಯಂತ ಕವಾಯತು ಕನ್ನಡದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಆಗಿದೆ. ಆ ಸಮಿತಿಯಲ್ಲಿ ತಾನೂ ಒಬ್ಬ ಸದಸ್ಯರಾಗಿದ್ದು, ಸಮಿತಿ ಸಭೆಯು ಮುಂದಿನ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಶೀಘ್ರದಲ್ಲೇ ರಾಜ್ಯದಲ್ಲಿ ಕನ್ನಡದಲ್ಲಿಯೇ ಕವಾಯತು ಪ್ರಕ್ರಿಯೆ ಆರಂಭವಾಗಲಿದೆ. ದ.ಕ.ಜಿಲ್ಲೆಯಲ್ಲೂ ಈ ನಿಟ್ಟಿನಲ್ಲಿ ಕನ್ನಡದಲ್ಲಿ ಕವಾಯತು ಆರಂಭಕ್ಕೆ ಕ್ರಮ ವಹಿಸುವುದಾಗಿ ಡಾ.ಬಿ.ಆರ್.ರವಿಕಾಂತೇ ಗೌಡ ಹೇಳಿದರು. ಈ ಸಂದರ್ಭ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.