ಕರಾವಳಿ

ಖಾಸಗಿ ಬಸ್ಸುಗಳು ಉತ್ತಮ ಸೇವೆ ನೀಡುವಾಗ ಸರಕಾರಿ ಬಸ್ಸುಗಳ ಅಗತ್ಯವಿಲ್ಲ :ಅಝೀಝ್ ಪರ್ತಿಪಾಡಿ ಸಲಹೆ

Pinterest LinkedIn Tumblr

ಸಿಟಿ ಬಸ್ ಓಡಾಡುವ ರಸ್ತೆಗಳಲ್ಲಿ ಸರಕಾರಿ ಬಸ್ಸುಗಳನ್ನು ಹಾಕಿದರೆ ಖಾಸಗಿ ಬಸ್ಸು ಮಾಲಕರು ಉದ್ಯಮವನ್ನು ಕಳೆದುಕೊಳ್ಳುವ ಭೀತಿ ಎದುರಿಸ ಬೇಕಾಗುತ್ತದೆ :ದ.ಕ. ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ವಿಷಾದ

ಮಂಗಳೂರು, ಜನವರಿ 24: ನಗರ ವ್ಯಾಪ್ತಿಯಲ್ಲಿ ಖಾಸಗಿ ಬಸ್ಸುಗಳು ಹಲವು ಸೌಲಭ್ಯಗಳೊಂದಿಗೆ ಉತ್ತಮವಾದ ಸೇವೆಯನ್ನು ನೀಡುತ್ತಿರುವಾಗ ಕೆ.ಎಸ್.ಆರ್.ಟಿ.ಸಿ ಬಸ್ ಹಾಕುವ ಅಗತ್ಯವಿಲ್ಲ. ಒಂದು ವೇಳೆ ಸರಕಾರ ಸಿಟಿ ಬಸ್ ಓಡಾಡುವ ರಸ್ತೆಗಳಲ್ಲಿ ಸರಕಾರಿ ಬಸ್ಸುಗಳನ್ನು ಹಾಕಿದರೆ ಖಾಸಗಿ ಬಸ್ಸು ಮಾಲಕರು ಉದ್ಯಮವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸ ಬೇಕಾಗುತ್ತದೆ ಎಂದು ದ.ಕ. ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ನೋವು ತೋಡಿಕೊಂಡಿದ್ದಾರೆ.

ಮಂಗಳವಾರ ಸಂಜೆ ನಗರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ದಶಕಗಳಿಂದ ನಗರದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಖಾಸಗಿ ಬಸ್ಸುಗಳ ವಿರುದ್ಧ ಸರಕಾರಿ ಬಸ್ಸುಗಳು ಅನಾರೋಗ್ಯಕರ ಸ್ಪರ್ಧೆ ನೀಡುತ್ತಿದ್ದು, ಇದರಿಂದ ಖಾಸಗಿ ಬಸ್ಸು ಮಾಲಕರು ಉದ್ಯಮವನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಖಾಸಗಿ ಬಸ್ಸು ರೂಟ್‌ಗಳಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಪ್ರವೇಶಗೈದಲ್ಲಿ ಖಾಸಗಿ ಬಸ್ಸುಗಳಲ್ಲಿ ದುಡಿಯುವ ಸಾವಿರಾರು ಕಾರ್ಮಿಕರು ಡ್ರೈವರ್ ಗಳು, ನಿರ್ವಾಹಕರು, ಕ್ಲೀನರ್‍೬ಗಳು, ಪೆಟ್ರೋಲ್ ಬಂಕ್ ಮಾಲಾಕರು, ಸಿಬ್ಬಂದಿಗಳು, ಗ್ಯಾರೇಜ್ ಸಿಬ್ಬಂದಿಗಳು / ಮಾಲಕರು, ಟಯರ್ ರೀಟ್ರೆಡಿಂಗ್ ರಿಸೋಲ್ ಮಾಲಕರು ಮತ್ತು ಸಿಬ್ಬಂದಿಗಳು, ಬಸ್ಸು ಬಿಡಿ ಭಾಗಗಳ ವಿತರಕರು, ಡೀಲರ್ ಗಳು ತಮ್ಮ ಕೆಲಸ ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಮಾತ್ರವಲ್ಲದೇ ಬಸ್ಸು ಮಾಲಕರು ಕೂಡ ಇದರಿಂದಾಗಿ ಬೀದಿ ಪಾಲಾಗುವುದು ಖಂಡಿತ.

ಅತ್ಯುತ್ತಮ ಖಾಸಗಿ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಬಸ್ಸು ಖರೀದಿಗಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿ ತಮ್ಮ ಜೀವನದ ನಿರ್ವಾಹಣೆಗಾಗಿ ಇದನ್ನೇ ನಂಬಿದ ನೂರಾರು ಬಸ್ಸು ಮಾಲಕರು ಬಸ್ಸುಗಳ ಸಾಲವನ್ನು ಮರುಪಾವಾತಿ ಮಾಡಲಾಗದೆ ಬೇರೆ ವೃತ್ತಿಯನ್ನೂ ಮಾಡಲಾಗದೆ ನೊಂದುಕೊಂಡು ದೇಶದ ಬಡ ರೈತರಿಗೆ ಬಂದ ಪರಿಸ್ಥಿತಿ ಬರುವುದರಲ್ಲಿ ಯಾವ ಸಂಶಯವೂವಿಲ್ಲ ಎಂದು ಅಝೀಝ್ ಪರ್ತಿಪಾಡಿ ದು:ಖ ತೋಡಿಕೊಂಡರು.

ಖಾಸಗಿ ಬಸ್ಸುಗಳು ಇನ್ನು ಮುಂದೆಯೂ ಉತ್ತಮ ಸೇವೆ ನೀಡಲು ಸಿದ್ಧವಿದೆ. ಅಪಘಾತ ರಹಿತ ಸೇವೆ ನೀಡುವಲ್ಲಿ ನಾವು ಬಹಳಷ್ಟು ಶ್ರಮಿಸುತ್ತಿದ್ದೇವೆ. ಆದರೆ ಖಾಸಗಿ ಬಸ್ಸು ಉದ್ಯಮವನ್ನು ಉಳಿಸುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಸಾರ್ವಜನಿಕರು ನಮಗೆ ಬೆಂಬಲ ನೀಡ ಬೇಕು ಎಂದು ಅಝೀಝ್ ಪರ್ತಿಪಾಡಿಯವರು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಡೀಸೆಲ್ ದರವು ನಿರಂತರವಾಗಿ ಏರಿಕೆಯಾಗುತ್ತಿದೆ. ಅಲ್ಲದೆ, ಇನ್ಸೂರೆನ್ಸ್ ಪ್ರೀಮಿಯಂ, ಚಾಸಿಸ್, ಬಸ್ಸು ಕವಚ ನಿರ್ಮಾಣ, ಆಯಿಲ್ ದರ, ಬಸ್ಸಿನ ಬಿಡಿ ಭಾಗಗಳು, ಟಯರ್ ರೀಸೋಲ್, ಗ್ಯಾರೇಜು ವೆಚ್ಚ ಮೊದಲಾದವುಗಳ ವೆಚ್ಚ ಏರಿಕೆಯಾಗುತ್ತಿರುವುದರಿಂದ ಬಸ್ಸುಗಳ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಇದೀಗ ಕೆಲವಡೆಗಳಲ್ಲಿ ಕೆಎಸ್ಸಾರ್ಟಿಸಿಯವರು ಖಾಸಗಿ ಬಸ್ಸುಗಳಿಗೆ ಅನಾರೋಗ್ಯಕರವಾಗಿ ಸ್ಪರ್ಧೆ ನೀಡುವುದು ಸರಿಯಲ್ಲ. ಇದರಿಂದ ಖಾಸಗಿ ಬಸ್ಸು ಮಾಲಕರ ಉದ್ಯಮ ಕಳೆದುಕೊಳ್ಳುವ ಭೀತಿ ಆವರಿಸಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಚೇತನ್ ಜಿ. ಕಾವೂರು, ಉಪಾಧ್ಯಕ್ಷ ಬಿ.ಪಿ.ದಿವಾಕರ್, ಜೊತೆ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಎ.ಕೆ.ಜಯರಾಮ ಶೇಖ, ಜಿ.ಶಶಿಧರ್ ಶೆಟ್ಟಿ, ಭಾಸ್ಕರ್ ಅಮೀನ್, ಜಯಶೀಲ ಅಡ್ಯಂತಾಯ, ವಿ.ಕೆ.ಪುತ್ರನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.