ಕರಾವಳಿ

ಮುಖ್ಯಮಂತ್ರಿಗಳಿಂದ ಹಿಂದೂ ವಿರೋಧಿ ಹೇಳಿಕೆ ; ಹಿಂದೂ ಸಂಘಟನೆಗಳಿಂದ ಬೇಷರತ್ ಕ್ಷಮೆಯಾಚಿಸಲು ಆಗ್ರಹ

Pinterest LinkedIn Tumblr

ಮಂಗಳೂರು,ಜನವರಿ.12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಆರ್‌ಎಸ್ಎಸ್ ಮತ್ತು ಇತರ ಪರಿವಾರ ಸಂಘಟನೆಗಳನ್ನು ಬಹಳ ಕೀಳಾಗಿ ಸಂಬೋಧಿಸಿ ಇವುಗಳೆಲ್ಲವೂ ಉಗ್ರ ಸಂಘಟನೆಗಳೆಂದು ಹೇಳಿರುವುದು ದುರ್ದೈವದ ಸಂಗತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೂ ಹಿಂದೂ ವಿರೋಧಿ ಕೆಲಸ ಮಾಡುತ್ತಿದ್ದು, ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್ ಆರೋಪಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಮಖ್ಯಮಂತ್ರಿಯವರು ಆರ್‌ಎಸ್ಎಸ್ ಮತ್ತು ಇತರ ಪರಿವಾರ ಸಂಘಟನೆಗಳ ಬಗ್ಗೆ ಬಹಳ ಕೀಳಾಗಿ ಹೇಳಿಕೆ ನೀಡುವ ಮೂಲಕ ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಆರ್‌ಎಸ್ಎಸ್, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಇನ್ನಿತರ ಸಂಘಟನೆಗಳಿಗೆ ತೋರಿದ ಅಗೌರವಕ್ಕೆ ಕೂಡಲೇ ಬೇಷರತ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಕೂಡಲೇ ಗೋಹತ್ಯೆ ವಿರೋಧಿ ಮಸೂದೆಯನ್ನು ಹಿಂತೆಗೆದುಕೊಂಡಿದ್ದಾರೆ. ಕರ್ನಾಟಕ ಗೋ ಅಯೋಗವನ್ನು ರದ್ದು ಮಾಡಿ ಗೋ ಶಾಲೆಗಳಿಗೆ ನೀಡುವ ಅನುದಾನ ಸ್ಥಗಿತಗೊಳಿಸಿದ್ದಾರೆ. ಹಲವಾರು ಸಲ ಉಡುಪಿಗೆ ಭೇಟಿ ನೀಡಿದ್ದರೂ ಹಿಂದೂಗಳ ಆರಾಧ್ಯ ದೈವ ಶ್ರೀ ಕೃಷ್ಣನ ಸನ್ನಿಧಿಗೆ ಒಮ್ಮೆಯೂ ಭೇಟಿ ನೀಡದ ಇವರು ಯಾವ ರೀತಿಯಲ್ಲಿ ಹಿಂದೂ ಎಂದು ಪ್ರಶ್ನಿಸಿದರು.

ಕನಕನಿಗೆ ಅವಮರ್ಯಾದೆ ಆದ ಉಡುಪಿಗೆ ತಾನು ಭೇಟಿ ನೀಡಲ್ಲ ಎನ್ನುವ ಮುಖ್ಯಮಂತ್ರಿಗಳು ಇಂದು ದೇಶದಲ್ಲಿಯೇ ಕನಕದಾಸರಿಗೆ ಅತ್ಯಂತ ಉನ್ನತ ರೀತಿಯಲ್ಲಿ ಗೌರವ ದೊರಕುವ ಸ್ಥಳ ಉಡುಪಿ ಎಂಬುದನ್ನು ಮರೆತಿದ್ದಾರೆ. ಹಿಂದುಗಳ ಅತ್ಯಂತ ಪವಿತ್ರ ಶ್ರದ್ಧಾ ಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಂಸಾಹಾರ ಸೇವಿಸಿ ದರ್ಶನಕ್ಕೆ ತೆರಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯವರನ್ನು ಅತ್ಯಂತ ಕೀಳುಮಟ್ಟದ ಪದ ಬಳಸಿ ನಿಂದಿಸಿದ್ದಾರೆ. ಇದು ಜನತೆಯ ಸಂಸ್ಕೃತಿ, ಸಂಸ್ಕಾರಕ್ಕೆ ಮಾಡಿದ ಅವಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರಾದ ಜಗದೀಶ್ ಶೇಣವ, ಶರಣ್ ಪಂಪ‌ವೆಲ್, ಗೋಪಾಲ್ ಕುತ್ತಾರ್ ಹಾಗೂ ಮತ್ತಿತ್ತರ ಪ್ರಮುಖರು ಉಪಸ್ಥಿತರಿದ್ದರು.

Comments are closed.