ಕರಾವಳಿ

ನಾಳೆ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ..?

Pinterest LinkedIn Tumblr

ಮಂಗಳೂರು, ಡಿಸೆಂಬರ್. 17: ಪ್ರಧಾನಿ ನರೇಂದ್ರ ಮೋದಿಯವರು ಡಿ. 18 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಲಕ್ಷದ್ವೀಪಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರು ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಾಧ್ಯತೆಗಳಿವೆ.

ಮಂಗಳೂರಿನಲ್ಲಿ ಮೋದಿಯವರ ಯಾವೂದೇ ಅಧಿಕೃತ ಕಾರ್ಯಕ್ರಮಗಳಿಲ್ಲ. ಡಿ.19ರಂದು ಪ್ರಧಾನಿಯವರು ಲಕ್ಷದ್ವೀಪಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮಂಗಳೂರು ನಿಲ್ದಾಣದಿಂದ ವಾಯು ಪಡೆಯ ಹೆಲಿಕಾಪ್ಟರ್ ಮೂಲಕ ಲಕ್ಷದ್ವೀಪಕ್ಕೆ ಪಯಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಅವರ ಪ್ರವಾಸ ಕಾರ್ಯಕ್ರಮ ಇನ್ನೂ ಅಧಿಕೃತವಾಗಿ ನಿಗದಿಯಾಗಿಲ್ಲ. ಮೂಲಗಳ ಪ್ರಕಾರ ಪ್ರಧಾನಿ ಅವರು ಡಿ. 18ರಂದು ರಾತ್ರಿಯೇ ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸುವ ನಿರೀಕ್ಷೆ ಇದೆ. ನಗರದ ಖಾಸಗಿ ಹೋಟೆಲ್ ಅಥವಾ ಸರ್ಕ್ಯುಟ್ ಹೌಸ್ ನಲ್ಲಿ ಅವರು ವಾಸ್ತವ್ಯ ಹೂಡಲಿದ್ದಾರೆ. ಡಿ. 19ರಂದು ಬೆಳಗ್ಗೆ ಲಕ್ಷದ್ವೀಪಕ್ಕೆ ತೆರಳಿ ಒಖಿ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾದ ಲಕ್ಷದ್ವೀಪದ ಪ್ರದೇಶಗಳನ್ನು ಪ್ರಧಾನಿಯವರು ವೀಕ್ಷಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ.

ಇನ್ನೊಂದು ಮೂಲದ ಪ್ರಕಾರ ಮೋದಿಯವರು ಡಿ. 19ರಂದು ಬೆಳಿಗ್ಗೆ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಲಕ್ಷದ್ವೀಪಕ್ಕೆ ತೆರಳುವ ಸಾಧ್ಯತೆ ಇದೆ. ಈ ಕುರಿತು ಯಾವೂದೇ ಅಧಿಕೃತ ಪ್ರವಾಸ ಕಾರ್ಯಕ್ರಮ ಪ್ರಧಾನಿಯವರ ಕಚೇರಿಯಿಂದ ಇನ್ನೂ ಬಂದಿಲ್ಲ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಅವರ ಪ್ರವಾಸದ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಹಿತಿ ಬಂದಿದ್ದು, ಕ್ಷೇತ್ರದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Comments are closed.