ಕರಾವಳಿ

ಆಳ್ವಾಸ್‌‌ ನುಡಿಸಿರಿಗೆ ಅದ್ಧೂರಿ ತೆರೆ : 13 ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ – ಗೌರವ / ನುಡಿಸಿರಿ ತೃಪ್ತಿ ತಂದು ಕೊಟ್ಟಿದೆ: ಡಾ.ಮೋಹನ್ ಆಳ್ವ

Pinterest LinkedIn Tumblr

ಮೂಡುಬಿದಿರೆ(ರತ್ನಾಕರ ವರ್ಣಿ ವೇದಿಕೆ, ಗೋಪಾಲಕೃಷ್ಣ ಅಡಿಗ ವೇದಿಕೆ), ಡಿಸೆಂಬರ್. 3:ಮೂಡಬಿದ್ರೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಕಳೆದ ಮೂರು ದಿನಗಳಿಂದ ನಡೆದ ಆಳ್ವಾಸ್ ನುಡಿಸಿರಿ 2017ರ ಸಮಾರೋಪ ಸಮಾರಂಭ ಹಾಗೂ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಬಾನುವಾರ ಜರಗಿತು.

ಆಳ್ವಾಸ್ ನುಡಿಸಿರಿಯ 2017ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿ, ಬಹುತ್ವ ಅಭಿನಯ ಆಗದೆ ಜೀವ ದ್ರವ್ಯ ಆಗಬೇಕಾದ ಅಗತ್ಯವಿದೆ. ಜೀವಪರ, ಮಾನವ ಪರವಾದ ನಂಬಿಕೆ ಹುಟ್ಟಿಸುವ ವಿಚಾರಗಳ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿರುವ ನುಡಿಸಿರಿ ಒಂದು ಕೊಂಡಿ ಎಂದು ಹೇಳಿದರು.

ಸಾಂಸ್ಕೃತಿಕ ಶೂನ್ಯತೆ ಯಿಂದ ದೇಶಕ್ಕೆ ಅಪಾಯ. ಮನೆಯೊಳಗೆ ಯಾವ ಧರ್ಮ ಇದ್ದರೂ ಬೀದಿಗೆ ಬಂದಾಗ ನಿಜವಾದ ಧರ್ಮ ಪ್ರಜಾಪ್ರಭುತ್ವ. ನಾನು ಯಾವೂದೇ ಪಕ್ಷದ ವಕ್ತಾರ ಅಲ್ಲ ಆದರೆ ಅನ್ನ ಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್ ಉತ್ತಮ ಯೋಜನೆ. ಯಾವ ಪಕ್ಷ ಇರಲಿ ಒಳ್ಳೆಯ ಕೆಲಸವನ್ನು ಬೆಂಬಲಿಸೋಣ. ಸದಾಭಿರುಚಿ, ಸದಾಶಯವನ್ನು ಬಿಟ್ಟುಕೊಡದೆ ಮುಂದುವರಿಸಬೇಕು ಎಂದು ನಾಗತಿಹಳ್ಳಿ ತಿಳಿಸಿದರು.

ತೃಪ್ತಿ ತಂದು ಕೊಟ್ಟಿದೆ: ನುಡಿಸಿರಿ ರೂವಾರಿ ಡಾ.ಮೋಹನ್ ಆಳ್ವ

ನುಡಿಸಿರಿ ನನಗೆ ತೃಪ್ತಿಯನ್ನು ತಂದು ಕೊಟ್ಟಿದೆ. ಮುಂದೆಯೂ ಎಲ್ಲರ ಸಹಕಾರದೊಂದಿಗೆ ಮುಂದುವರಿಸುವ ಉದ್ದೇಶ ಹೊಂದಿದ್ದೇನೆ. ಕರ್ನಾಟಕದ ಬಹುತ್ವದ ನೆಲೆಯ ಬಗ್ಗೆ ಸಾಕಷ್ಟು ಚಿಂತನೆ ಮಂಥನ ನಡೆದಿದೆ. ಕೃಷಿ ಸಿರಿ ಹೆಚ್ಚು ಜನಾಕರ್ಷಣೆಯಾಗಿತ್ತು. ಸಾಹಿತಿ ಎಷ್ಟು ಮುಖ್ಯವೋ ಕಲಾವಿದರು ಅಷ್ಟೇ ಮುಖ್ಯ ಅವರನ್ನು ಗೌರವಿಸುವ ಆಶಯವಿದೆ. ವಿದ್ಯಾರ್ಥಿಗಳು ನೂರು ಕಾಲ ಇದನ್ನು ಮುಂದುವರಿಸುವ ಭರವಸೆ ಮೂಡಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ ಸಮಾರೋಪ ಸಮಾರಂಭದ ಸ್ವಾಗತ ಭಾಷಣದಲ್ಲಿ ತಿಳಿಸಿದರು.

ಈ ಬಾರಿ ನುಡಿಸಿರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತ್ಗೆ ಉದ್ಯೋಗ ಮೇಳಕ್ಕೂ ಉತ್ತಮ ಪ್ರತಿಕ್ರೀಯೆ ದೊರಕಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಉದ್ಯಮಗಳು ಸ್ಥಾಪನೆಯಾಗಬೇಕು ಈ ಸಂಸ್ಥೆಗಳು ಇಲ್ಲಿನ ಜನರ ಋಣವನ್ನು ಮರೆಯಬಾರದು.ಅವರಿಗೆ ಉದ್ಯೋಗ ಕೊಡುವಂತಾಗಬೇಕು. ಕನ್ನಡ ಮಾಧ್ಯಮಗಳಲ್ಲಿ ಕಲಿತವರಿಗೂ ಅವರ ಕೌಶಲ್ಯವನ್ನು ಪರಿಗಣಿಸಿ ಅವಕಾಶ ನೀಡಬೇಕು. ಉದ್ಯೋಗ ಸಿರಿ ಇನ್ನಷ್ಟು ವಿಸ್ತರಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಈ ಬಾರಿ ಕೃಷಿ ಸಿರಿಗೆ ಎಲ್ಲರ ಮೆಚ್ಚುಗೆ ಸಿಕ್ಕಿದೆ. ಕನ್ನಡ ನಾಡಿನಲ್ಲಿ ಇರುವ ಉದ್ದಿಮೆಗಳು ತಮ್ಮ ಲಾಭಾಂಶದಲ್ಲಿ ಸ್ವಲ್ಪ ಭಾಗ ಕನ್ನಡಕ್ಕೆ ನೀಡಬೇಕಾಗಿದೆ. ಕನ್ನಡಿಗರಿಗೆ ಕೆಲಸ ನೀಡಬೇಕಾಗಿದೆ ಎಂದರು. ಕನ್ನಡ ಮಾಧ್ಯಮದಲ್ಲಿ 10 ನೇ ತರಗತಿಯವರೆಗೆ ಕಲಿತವರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಸಿರಿ ಮಾಡಲಾಗಿದ್ದು, ಮುಂದೆ ಇದಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುವುದು ಎಂದು ಡಾ.ಮೋಹನ್ ಆಳ್ವ ಹೇಳಿದರು.

13 ಸಾಧಕರಿಗೆ ಆಳ್ವಾಸ್ ನುಡಿ ಸಿರಿ ಪ್ರಶಸ್ತಿ – ಗೌರವ

ಕಾರ್ಯಕ್ರಮದಲ್ಲಿ ಅತಿವಂದನೀಯ ಬಿಷಪ್ ಹೆನ್ರಿ ಡಿಸೋಜ, ನಾಡೋಜ ಡಾ. ಎನ್.ಸಂತೋಷ್ ಹೆಗ್ಡೆ, ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಪ್ರೊ. ಕೆ.ಬಿ.ಸಿದ್ದಯ್ಯ, ಪ್ರೊ. ಬಿ.ಸುರೇಂದ್ರ ರಾವ್, ಡಾ. ಎಂ.ಪ್ರಭಾಕರ ಜೋಷಿ, ಪದ್ಮರಾಜ್‌ ದಂಡಾವತಿ, ಡಾ. ತೋನ್ಸೆ ವಿಜಯಕುಮಾರ್ ಶೆಟ್ಟಿ, ಡಾ. ತೇಜಸ್ವಿ ಕಟ್ಟೀಮನಿ, ಡಾ. ವಿಜಯಾ ದಬ್ಬೆ, ಪ್ರೊ. ಜಿ.ಎಚ್.ಹನ್ನೆರಡುಮಠ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ರತ್ನಮಾಲಾ ಪ್ರಕಾಶ್, ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರಿಗೆ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದ ವೇದಿಕೆಯಲ್ಲಿ ಶಾಸಕ ಅಭಯ ಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶೀ ಅಮರನಾಥ ಶೆಟ್ಟಿ ಹಾಗೂ ನುಡಿಸಿರಿ ಸನ್ಮಾನಿತರು ಉಪಸ್ಥಿತರಿದ್ದರು.

Comments are closed.