ಹಿರಿಯಡಕ: ಮಹತೋಭಾರ ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಎರಡನೇ ಹಂತದ ಜೀರ್ಣೋದ್ದಾರ ಕಾರ್ಯಾರಂಭಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದ್ದು, ತಾ.14-12-2017 ರಂದು ಶ್ರೀ ಕ್ಷೇತ್ರ ಹಿರಿಯಡಕ ದೇವರ ಗರ್ಭಗೃಹದ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ನಾಳೆ ತಾ.04-12-2017 ರಂದು ಸಂಕೋಚ ಪ್ರಕ್ರಿಯೆ ಹಾಗು ಬಾಲಾಲಯ ಪ್ರತಿಷ್ಠೆ ಜರುಗಲಿದೆ.
ಇಂದು ಮುಂಜಾನೆ ಈ ಪ್ರಯುಕ್ತ ಊರ ಪರಊರ ನೂರಾರು ಭಕ್ತರು ಶ್ರೀ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಡಳಿತ, ಅರ್ಚಕ, ಸಿಬ್ಬಂದಿ ವರ್ಗ, ಜೀರ್ಣೋದ್ದಾರ ಸಮಿತಿ, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಈಗಾಗಲೇ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಸ್ವಯಂಸೇವಕರು ಕರಸೇವೆಗೆ ತಮ್ಮ ಹೆಸರನ್ನು ನೋಂದಾಯಿಸಿದ್ದು, ನಾಳೆಯಿಂದ ಹಗಲು ರಾತ್ರಿ ದೇವಸ್ಥಾನದ 2ನೇ ಹಂತದ ಜೀರ್ಣೋದ್ದಾರ ಕಾರ್ಯ ಪ್ರಾರಂಭವಾಗಲಿದೆ.