ಕರಾವಳಿ

ಓಖಿ ಪ್ರಭಾವ : ಉಳ್ಳಾಲದಲ್ಲಿ ಅಲೆಗಳ ಅಬ್ಬರಕ್ಕೆ ಎರಡು ಮನೆಗಳು ಸಮುದ್ರ ಪಾಲು

Pinterest LinkedIn Tumblr

ಮಂಗಳೂರು / ಉಳ್ಳಾಲ, ಡಿಸೆಂಬರ್. 03: ಓಖಿ ಚಂಡಮಾರುತದ ಪ್ರಭಾವದಿಂದ ಸೋಮೇಶ್ವರ, ಉಳ್ಳಾಲ ವ್ಯಾಪ್ತಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಅಲೆಗಳ ಅಬ್ಬರಕ್ಕೆ ಉಳ್ಳಾಲ ಪರಿಸರದಲ್ಲಿ ಎರಡು ಮನೆಗಳೇ ನಾಪತ್ತೆಯಾಗಿವೆ.

ಚರ್ಚ್‌ಗೆ ಹೋಗಿದ್ದ ಮನೆಮಂದಿ ವಾಪಾಸ್ ಬಂದಾಗ ಉಳ್ಳಾಲ ಸಿ ಗ್ರೌಂಡ್ ಪರಿಸರದ ಎರಡು ಮನೆಗಳು ನಾಪತ್ತೆಯಾಗಿದ್ದು, ಮನೆಮಂದಿ ಆತಂಕಕ್ಕೀಡಾಗಿದ್ದಾರೆ. ಅಲ್ಲಿ ಮನೆಯ ದಾರಿ ಮಾತ್ರ ಇದ್ದು, ಪರಿಸರದಲ್ಲಿ ಸುಮಾರು 200 ಮೀಟರ್ ಒಳಕ್ಕೆ ಸಮುದ್ರದ ನೀರು ನುಗ್ಗಿದ್ದು, ಎರಡು ಮನೆಗಳು ಪೂರ್ತಿಯಾಗಿ ಕಡಲಿಗೆ ಸೇಳೆದಿದೆ. ಇನ್ನೊಂದು ಮನೆಗೆ ಭಾಗಶ: ಹಾನಿಯಾಗಿರುವ ಬಗ್ಗೆ ತಿಳಿದು ಬಂದಿದೆ.

ಫಿಲೋಮಿನಾ ಫೆರ್ನಾಂಡಿಸ್ ಮತ್ತು ಎವರೆಸ್ಟ್ ಅಲ್ಫೋಸ್ನ್ ಅವರ ಮನೆ ನಾಮಾವಶೇಷವಾಗಿದೆ. ಇಲ್ಲಿ ಸಮುದ್ರದ ನೀರು ಕಡಲ್ಕೊರೆತ ತಡೆಗೋಡೆಯನ್ನು ದಾಟಿ ಬಂದಿದೆ. ಶನಿವಾರ ಸಂಜೆ ಚರ್ಚ್‌ಗೆ ಹೋಗಿದ್ದ ಫಿಲೋಮಿನಾ ಫೆರ್ನಾಂಡಿಸ್ ಮತ್ತು ಎವರೆಸ್ಟ್ ಅಲ್ಫೋಸ್ನ್ ಅವರ ಮನೆಯವರು ರಾತ್ರಿ 10 ಗಂಟೆಗೆ ವಾಪಸ್ಸು ಬಂದಾಗ ಅಲ್ಲಿ ಮನೆಯ ಅವಶೇಷವೂ ಇರಲಿಲ್ಲ. ಮನೆಯಲ್ಲಿದ್ದ ಸುಮಾರು ಆರು ಲಕ್ಷ ಮೌಲ್ಯದ ಸೊತ್ತುಗಳು ಸಮುದ್ರ ಪಾಲಾಗಿವೆ.

ಸೋಮೇಶ್ವರದಲ್ಲೂ ಅಲೆಗಳ ಅಬ್ಬರ :

ಸೋಮೇಶ್ವರ ಬೀಚ್ನಲ್ಲಿ ಕೂಡ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಮನೆಗಳಿಗೆ ನೀರು ಅಪ್ಪಲಿಸಿದ್ದು, ಕೆಲವು ಮನೆಗಳು ಅಪಾಯದಂಚಿನಲ್ಲಿವೆ. ಘಟನೆಯಿಂದ ಸ್ಥಳೀಯ ನಾಗರಿಕರಲ್ಲಿ ಆತಂಕ ಮನೆ ಮಾಡಿದೆ.ಶನಿವಾರ ಸಂಜೆಯಿಂದಲೇ ಸಮುದ್ರದ ಅಲೆಗಳಲ್ಲಿ ಏರಿಳಿತ ಕಂಡುಬಂದಿದ್ದು, ರಾತ್ರಿ ಹೊತ್ತು ಬಿರುಸುಗೊಂಡಿದೆ. ಅಲ್ಲೆಗಳು ಬೃಹದಾಕಾರದಲ್ಲಿ ತೀರವನ್ನು ಅಪ್ಪಳಿಸುತ್ತಿವೆ.

ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಕೈಕೋ, ಮುಕ್ಕಚ್ಚೇರಿ, ಕಿಲೆರಿಯಾ ನಗರ, ಸುಭಾಷ ನಗರ ಭಾಗದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಕಡಲ ತೀರದ ಮನೆಗಳು ಅಪಾಯದಂಚಿನಲ್ಲಿವೆ.ಉಚ್ಚಿಲದಲ್ಲಿ ರಸ್ತೆಗೆ ನೀರು ಅಪ್ಪಳಿಸಿದ್ದು, ಮೊಗವೀರಪಟ್ನದಲ್ಲೂ ಸಮುದ್ರದ ಅಲೆಗಳ ಅಬ್ಬರ ಬಿರುಸುಗೊಂಡಿದೆ. ಮುನ್ನಚ್ಚೆರಿಕೆಯಾಗಿ ಕಿಲರಿಯನಗರದಲ್ಲಿ ಸ್ಥಳೀಯರು ಮನೆಗಳನ್ನು ತೆರವುಗೊಳಿಸಿದ್ದಾರೆ. ಕೋಟೆಪುರದಲ್ಲಿ ಪ್ಲಾಂಟ್ವೊಂದರ ಸಿಬ್ಬಂದಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಉಳ್ಳಾಲದ ರೆಸಾರ್ಟ್ವೊಂದಕ್ಕೆ ಸಮುದ್ರ ನೀರು ಅಪ್ಪಳಿಸಿದೆ.

ದರ್ಗಾ ಸಮಿತಿಯಿಂದ ಪರ್ಯಾಯ ವ್ಯವಸ್ಥೆ :

ಕಡಲಬ್ಬರದ ಹಿನ್ನೆಲೆಯಲ್ಲಿ ತೆರವುಗೊಂಡಿರುವ ತೀರದ ನಿವಾಸಿಗಳನ್ನು ಉಳ್ಳಾಲ ದರ್ಗಾ ಸಮಿತಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ರವಿವಾರವೂ ಮುಂದುವರಿದ ಅಲೆಗಳ ಅಬ್ಬರ :

ಓಖಿ ಚಂಡಮಾರುತದ ಪ್ರಭಾವದಿಂದ ಸೋಮೇಶ್ವರ, ಉಳ್ಳಾಲ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಪ್ರಕ್ಷುಬ್ದಗೊಂಡಿದ್ದ ಕಡಲು ರವಿವಾರ ಬೆಳಗ್ಗೆ ಅಲೆಗಳ ಅಬ್ಬರ ಮುಂದುವರಿದಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಶನಿವಾರ ರಾತ್ರಿ ಸುಮಾರು 8 ಗಂಟೆಯಿಂದ ಕಡಲು ಪ್ರಕ್ಷುಬ್ದಗೊಂಡು ಸಮುದ್ರದ ಬೃಹತ್ ಅಲೆಗಳು ಕೈಕೋ, ಕಿಲೆರಿಯಾ ನಗರ ಮೊದಲಾದ ಕಡೆಗಳಲ್ಲಿ ಮನೆಗಳಿಗೆ ಅಪ್ಪಳಿಸಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಕೈಕೋ, ಮುಕ್ಕಚ್ಚೇರಿ, ಕಿಲೆರಿಯಾ ನಗರ, ಸುಭಾಷ ನಗರ, ಮೊಗವೀರಪಟ್ನ ಮೊದಲಾದ ಕಡೆಗಳ ತೀರ ನಿವಾಸಿಗಳಿಗೆ ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು.

ರವಿವಾರ ಬೆಳಗ್ಗೆಯಿಂದ ಅಲೆಗಳ ಅಬ್ಬರ ಮುಂದುವರಿದಿದೆ.ಮುಂಜಾಗ್ರತ ಕ್ರಮವಾಗಿ ಕೆಲವು ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಹೈ ಅಲರ್ಟ್ ಘೋಷಣೆ:

ಈಗಾಗಲೇ ಲಕ್ಷದೀಪದಲ್ಲಿ ತಾಂಡವವಾಡಿರುವ ಓಖಿ ಚಂಡಮಾರುತ ರಾಜ್ಯದ ಕರಾವಳಿಗೂ ಹೊಡೆತ ನೀಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅರಬ್ಬಿ ಸಮುದ್ರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಮಂಗಳೂರಿನಿಂದ ಕಾರವಾರದವರೆಗಿನ 320 ಕಿ.ಮೀ. ಉದ್ದದ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ತೂಫಾನ್ ಆಗಮನದ ಬಗ್ಗೆ ಎರಡು ದಿನ ಮೊದಲೇ ಅಂದಾಜಿಸಿದ್ದ ಮೀನುಗಾರರು, ಕಡಲಿಗಿಳಿಯದೆ ಅಂತರ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಡಲಿನ ಅಬ್ಬರ ಜೋರಾಗಿದ್ದು, ರಾಕ್ಷಸ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸತೊಡಗಿವೆ. ಸಮುದ್ರದಲ್ಲಿ ಅಪಾಯದ ಸಾಧ್ಯತೆಯಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಹಿಂತಿರುಗುತ್ತಿವೆ.

ರಾಜ್ಯ ಕಂದಾಯ ಪ್ರಕೃತಿ ವಿಕೋಪ ಮುನ್ನೆಚ್ಚರಿಕಾ ಇಲಾಖೆಯಿಂದ ಈಗಾಗಲೇ ಈ ಬಗ್ಗೆ ಸೂಚನೆ ನೀಡಿದ್ದು, ಡಿ.3ರವರೆಗೆ ಸಮುದ್ರದ ಗಾಳಿಯ ವೇಗ 45 ರಿಂದ 65 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯ ಬಗ್ಗೆಯೂ ತಿಳಿಸಿದೆ. ಚಂಡಮಾರುತದ ಪ್ರಭಾವದಿಂದ ಅರಬ್ಬಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಇನ್ನು ಮಂಗಳೂರಿನ ಉಳ್ಳಾಲ ಭಾಗದಲ್ಲಿ 25ಕ್ಕೂ ಹೆಚ್ಚು ನಾಡದೋಣಿಗಳನ್ನು ತೀರಕ್ಕೆಳೆದು ಕಟ್ಟಲಾಗಿದೆಯಲ್ಲದೇ, ಮೀನುಗಾರರು ಕಡಲಿನ ವೈಪರೀತ್ಯ ಕಂಡು ದಿಗಿಲುಗೊಂಡಿದ್ದರು. ಆದರೆ, ಜೀವನಕ್ಕೆ ಕಡಲನ್ನೇ ನಂಬಿಕೊಂಡಿದ್ದ ಮೀನುಗಾರರಂತೂ ಈ ಸ್ಥಿತಿಯಿಂದ‌ ಕಂಗಾಲಾಗಿದ್ದಾರೆ.

ತಮಿಳುನಾಡು, ಕೇರಳದಲ್ಲಿ ನಿರಂತರ ಮಳೆ :

ಲಕ್ಷದ್ವೀಪದತ್ತ ಸಾಗುತ್ತಿರುವ ಒಖೀ ಚಂಡಮಾರುತವು ತಮಿಳುನಾಡು, ಕೇರಳ ಕರಾವಳಿಯನ್ನು ಅಕ್ಷರಶಃ ನಡುಗಿಸಿದೆ. ಚಂಡಮಾರುತದ ಪ್ರಭಾವದಿಂದಾಗಿ ಈ ಎರಡೂ ರಾಜ್ಯಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

Comments are closed.