ಕರಾವಳಿ

ಮಂಗಳೂರಿನ ಪ್ರಥಮ ಸರಕಾರಿ ಡಿಜಿಟಲ್ ಎಲ್‍ಇಡಿ ಫಲಕಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು ನವೆಂಬರ್ 28 : ರಾಜ್ಯ ಸರಕಾರದ ವಿವಿಧ ಯೋಜನೆಗಳ ಮತ್ತು ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಥಾಪಿಸಿರುವ ಡಿಜಿಟಲ್ ಎಲ್‍ಇಡಿ ಫಲಕವನ್ನು ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಂಗಳವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಜನಸಾಮಾನ್ಯರು ಈ ಯೋಜನೆಗಳ ಪ್ರಯೋಜನ ಪಡೆಯಲು ಅರಿವು ಮೂಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ಆಧುನಿಕ ತಂತ್ರಜ್ಞಾನದ ಎಲ್‍ಇಡಿ ಡಿಜಿಟಲ್ ಫಲಕವನ್ನು ಪ್ರಮುಖ ಜನಸಂದಣಿ ಪ್ರದೇಶದಲ್ಲಿ ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಈ ಎಲ್‍ಇಡಿ ಫಲಕದಲ್ಲಿ ಸರಕಾರದ ಯೋಜನೆಗಳೊಂದಿಗೆ ಆರೋಗ್ಯ, ಭದ್ರತೆ ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುವಂತೆ ಸಚಿವರು ಸೂಚಿಸಿದರು.

ಸಮಾರಂಭದಲ್ಲಿ ಶಾಸಕರಾದ ಜೆ.ಆರ್. ಲೋಬೋ, ಬಿ.ಎ. ಮೊಹಿದೀನ್ ಬಾವಾ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉಪಸ್ಥಿತರಿದ್ದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ಝೇಂಕಾರ್ ಸಂಸ್ಥೆಯ ರೂಪೇಶ್ ವಂದಿಸಿದರು. ಫ್ರಾನ್ಸಿಸ್ ಲೂಯಿಸ್ ನಿರೂಪಿಸಿದರು.

ವಾರ್ತಾ ಇಲಾಖೆಯು ಕರ್ನಾಟಕದ 10 ಜಿಲ್ಲಾ ಕೇಂದ್ರಗಳಲ್ಲಿ ಈ ಡಿಜಿಟಲ್ ಫಲಕ ಅಳವಡಿಸಿದೆ. ಈ ಡಿಜಿಟಲ್ ಫಲಕ ಪ್ರತೀ ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.

Comments are closed.