ಕರಾವಳಿ

ಡಿ.1ರಿಂದ 3ರವರೆಗೆ ಮೂಡುಬಿದಿರೆಯಲ್ಲಿ “14ನೆ ಆಳ್ವಾಸ್ ನುಡಿಸಿರಿ : ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ

Pinterest LinkedIn Tumblr

ಮಂಗಳೂರು, ನವೆಂಬರ್.25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನವಾದ 14ನೆ ‘ಆಳ್ವಾಸ್ ನುಡಿಸಿರಿ’ಗೆ ಮೂಡುಬಿದಿರೆ ಸಜ್ಜಾಗಿದ್ದು,ನಾಡು-ನುಡಿಯ ಎಚ್ಚರವನ್ನು, ಕನ್ನಡ ಸಂಸ್ಕೃತಿಯ ಕಂಪನ್ನು ಪಸರಿಸುವುದಕ್ಕಾಗಿ ಆಯೋಜಿಸಲಾಗುವ ಈ ಸಮ್ಮೇಳನವು ಡಿ.1ರಿಂದ 3ರವರೆಗೆ ಸುಂದರಿ ಆನಂದ ಆಳ್ವ ಆವರಣದಲ್ಲಿರುವ ರತ್ನಾಕರವರ್ಣಿ ವೇದಿಕೆಯ ಎಂ.ಗೋಪಾಲಕೃಷ್ಣ ಅಡಿಗ ಸಭಾಂಗಣದಲ್ಲಿ ನಡೆಯಲಿದೆ. ಅದಕ್ಕೆ ಪೂರಕವಾಗಿ ನ.30ರಂದು ‘ವಿದ್ಯಾರ್ಥಿ ಸಿರಿ’ ಜರಗಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಆಳ್ವಾಸ್ ನುಡಿಸಿರಿ ಸಮ್ಮೇಳನದ ರುವಾರಿ ಡಾ.ಮೋಹನ್ ಆಳ್ವ ತಿಳಿಸಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 13 ವರ್ಷದಲ್ಲಿ ಸಮ್ಮೇಳನವು ಉದ್ಘಾಟಕರ-ಅಧ್ಯಕ್ಷರ-ಸಂಪನ್ಮೂಲ ವ್ಯಕ್ತಿಗಳ ವಿಚಾರಪ್ರಚೋದಕ ಮಾತುಗಳು ಮತ್ತು ವಾಗ್ವಾದಗಳನ್ನು ಸೃಷ್ಟಿಸುತ್ತಾ, ಸಂಸ್ಕೃತಿ-ಸತ್ಕಾರಗಳು ಕನ್ನಡದ ಕಂಪನ್ನು ಪಸರಿಸುತ್ತಾ ಹಳೆಬೇರು-ಹೊಸಚಿಗುರುಗಳ ಮೂಲಕ ಕನ್ನಡ ಮನಸ್ಸನ್ನು ಉದ್ಧೀಪಿಸುವ ಕೆಲಸವನ್ನು ಅವ್ಯಾಹತವಾಗಿ ಮಾಡಿಕೊಂಡು ಬರುತ್ತಿದೆ.

ಡಿ.1ರಂದು ಬೆಳಗ್ಗೆ 8:30ಕ್ಕೆ ಸಾಂಸ್ಕೃತಿಕ ಮೆರವಣೆಗೆಯನ್ನು ಮುಲ್ಕಿ ಚರ್ಚ್ನ ಧರ್ಮಗುರು ಫಾ.ಎಫ್.ಎಕ್ಸ್.ಗೋಮ್ಸ್ ಉದ್ಘಾಟಿಸಲಿದ್ದು, ನಿಟ್ಟೆ ವಿವಿ ಕುಲಪತಿ ಡಾ.ಎನ್.ವಿನಯ ಹೆಗ್ಡೆ ಧ್ವಜಾರೋಹಣ ಮಾಡಲಿದ್ದಾರೆ. ಕನ್ನಡ ಖ್ಯಾತ ಸಾಹಿತಿ, ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಖ್ಯಾತ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಉದ್ಘಾಟಿಸಲಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ವಿಧಾನ ಪರಿಷತ್ನ ವಿಪಕ್ಷ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಹಾಗೂ ಎಸ್ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮೂರು ಗೋಷ್ಠಿಗಳು: ‘ಕರ್ನಾಟಕ : ಬಹುತ್ವದ ನೆಲೆಗಳು’ ಎಂಬ ಪ್ರಧಾನ ಪರಿಕಲ್ಪನೆಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ 3 ಪ್ರಧಾನ ಗೋಷ್ಠಿಗಳನ್ನು ಅಳವಡಿಸಲಾಗಿದೆ. ಮೊದಲನೆ ಗೋಷ್ಠಿಯಲ್ಲಿ ‘ಸಾಹಿತ್ಯ-ಆಶಯದ ನೆಲೆ’ಯ ವಿಚಾರದ ‘ಪ್ರಾಚೀನ ಸಾಹಿತ್ಯ’ದ ಕುರಿತು ಡಾ.ಕೃಷ್ಣಮೂರ್ತಿ ಹನೂರು ಹಾಗೂ ‘ಆಧುನಿಕ ಸಾಹಿತ್ಯ’ದ ಕುರಿತು ಆರ್.ತಾರಿಣಿ ಶುಭದಾಯಿನಿ ವಿಚಾರ ಮಂಡಿಸಲಿದ್ದಾರೆ.

2ನೇ ಗೋಷ್ಠಿ ‘ಮಾಧ್ಯಮ-ಸ್ವಮರ್ಶೆಯ ನೆಲೆ’ಯಾಗಿದ್ದು ‘ಪತ್ರಿಕೆಯ’ ಕುರಿತು ಡಾ.ನಿರಂಜನ ವಾನಳ್ಳಿ, ‘ದೃಶ್ಯಮಾಧ್ಯಮದ’ದ ಕುರಿತು ಡಾ.ನಿತ್ಯಾನಂದ ಬಿ. ಶೆಟ್ಟಿ ಹಾಗೂ ‘ಸಾಮಾಜಿಕ ಜಾಲತಾಣ’ದ ಕುರಿತು ಎನ್.ರವಿಶಂಕರ್ ಪ್ರಬಂಧ ಮಂಡಿಸಲಿದ್ದಾರೆ.3ನೇ ಗೋಷ್ಠಿ ‘ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ’ಯಾಗಿದ್ದು ‘ಆರಾಧನಾ ದೃಷ್ಟಿ’ಯ ಕುರಿತು ಎಸ್.ಷಡಕ್ಷರಿ ಹಾಗೂ ‘ಅನುಭಾವದ ದೃಷ್ಟಿ’ಯ ಕುರಿತು ವೀಣಾ ಬನ್ನಂಜೆ ವಿಚಾರ ಮಂಡಿಸಲಿದ್ದಾರೆ.

ಈ ಸಮ್ಮೇಳನದಲ್ಲಿ 7 ವಿಶೇಷ ಉಪನ್ಯಾಸಗಳಿವೆ. ‘ಜೀವನ ವಿಧಾನ-ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತು ಡಾ.ಜಿ. ಬಿ.ಹರೀಶ್, ‘ಚಿತ್ರಕಲೆ, ರಂಗಭೂಮಿ ಮತ್ತು ಪ್ರದರ್ಶನ ಕಲೆ’ ಕುರಿತು ಡಾ.ಡಿ.ಎಸ್.ಚೌಗಲೆ, ‘ಶಾಲಾ ಶಿಕ್ಷಣದ ಸ್ಥಿತಿಗತಿ – ಸಾಧ್ಯತೆಗಳು ಮತ್ತು ಸವಾಲುಗಳು’ ಕುರಿತು ಪ್ರೊ. ನಿರಂಜನಾರಾಧ್ಯ ವಿ.ಪಿ., ‘ಕಲಾಭಿರುಚಿ’ ಕುರಿತು ಎ.ಈಶ್ವರಯ್ಯ, ‘ಕಾಸರಗೋಡಿನ ಕನ್ನಡಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳು’ ಕುರಿತು ಮುರಳೀಧರ ಬಳ್ಳಕ್ಕುರಾಯ, ‘ನಂಬಿಕೆ ಮತ್ತು ವೈಚಾರಿಕತೆ’ ಕುರಿತು ಡಾ.ರಂಜಾನ್ ದರ್ಗಾ, ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಬಗ್ಗೆ ಪ್ರೊ ರವೀಂದ್ರ ರೇಷ್ಮೆ ವಿಚಾರ ಮಂಡಿಸಲಿದ್ದಾರೆ ಎಂದು ಮೋಹನ್ ಆಳ್ವ ವಿವರಿಸಿದರು.

ಸಮ್ಮೇಳನದ 3 ದಿನಗಳಲ್ಲಿ ಕವಿಸಮಯ-ಕವಿನಮನ ಎಂಬ ಕವಿಗಳನ್ನು ಗೌರವಿಸುವ ವಿಶಿಷ್ಟ ಕಾರ್ಯ ಕ್ರಮವಿದೆ. ಒಬ್ಬ ಕವಿಗೆ ತನ್ನ ಅನುಭವಗಳನ್ನು ಹಂಚಿಕೊಳ್ಳಲು 7 ನಿಮಿಷಗಳ ಕಾಲಾವಧಿ ಇರುತ್ತದೆ. ಜೊತೆಗೆ ಒಂದು ಕವನವನ್ನು ವಾಚಿಸುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಆ ಕವನವನ್ನು ಸಂಗೀತಕ್ಕೆ ಅಳವಡಿಸಿ ಹಾಡುವುದರೊಂದಿಗೆ ಕುಂಚಕ್ಕೂ ಅಳವಡಿಸಲಾಗುತ್ತದೆ. ಒಬ್ಬ ಕವಿಗೆ 20 ನಿಮಿಷಗಳ ಕಾಲಾವಧಿ ಇರುವ ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಊರುಗಳ 9 ಕವಿಗಳಿಗೆ ಅವಕಾಶ ನೀಡಲಾಗಿದೆ.

ಕನ್ನಡ ನಾಡು-ನುಡಿ-ಸಂಸ್ಕೃತಿಗಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದವರಿಗೆ ಸಲ್ಲಿಸುವ ಗೌರವಾರ್ಪಣೆಯೇ ‘ಸಂಸ್ಮರಣೆ’ ಕಾರ್ಯಕ್ರಮ. ಈ ವರ್ಷ ರಂಗಭೂಮಿ ಖ್ಯಾತಿಯ ‘ನಾಡೋಜ ಏಣಗಿ ಬಾಳಪ್ಪ’ರ ಕುರಿತು ಡಾ.ಗಣೇಶ್ ಅಮೀನಗಡ ಹಾಗೂ ಯಕ್ಷಗಾನದ ಚಿಟ್ಟಾಣಿ ರಾಮಚಂದ್ರ ಹೆಗಡೆಯ ಕುರಿತು ವಿದ್ವಾನ್ ಡಾ.ಉಮಾಕಾಂತ ಭಟ್ ಮೇಲುಕೋಟೆ ಮಾತನಾಡಲಿದ್ದಾರೆ.

ಕನ್ನಡದ ಖ್ಯಾತ ಸಾಹಿತಿಗಳಾದ ಎಂ.ಗೋಪಾಲಕೃಷ್ಣ ಅಡಿಗ ಹಾಗೂ ಎಂ.ಕೆ.ಇಂದಿರಾ ಅವರ ಜನ್ಮಶತಮಾನೋತ್ಸವ ವರ್ಷದ ಹಿನ್ನಲೆಯಲ್ಲಿ ಕ್ರಮವಾಗಿ ಎಸ್.ಆರ್.ವಿಜಯಶಂಕರ್ ಹಾಗೂ ಭುವನೇಶ್ವರಿ ಹೆಗಡೆ ಮಾತನಾಡಲಿದ್ದಾರೆ.

ನನ್ನ ಕತೆ ನಿಮ್ಮ ಜೊತೆ : ಕನ್ನಡ ನಾಡಿನಲ್ಲಿ ಖ್ಯಾತರಾದ ವ್ಯಕ್ತಿಯೊಬ್ಬರು ತನ್ನ ಬದುಕಿನ ಏಳುಬೀಳುಗಳನ್ನು ಪರಿಚಯಿಸುವ ‘ನನ್ನ ಕತೆ ನಿಮ್ಮ ಜೊತೆ’ ಕಾರ್ಯಕ್ರಮದಲ್ಲಿ ಕಾಸರಗೋಡು ಚಿನ್ನ, ಕಾರ್ಗಿಲ್ ಯುದ್ಧದಲ್ಲಿ ವೀರಸಾಹಸ ಮೆರೆದ ಕ್ಯಾಪ್ಟನ್ ನವೀನ್ ನಾಗಪ್ಪ ಹಾಗೂ ನಾಡೋಜ ಡಾ.ಎನ್. ಸಂತೋಷ ಹೆಗ್ಡೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ.

15 ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ:

ಕನ್ನಡ ನಾಡು-ನುಡಿ-ಸಂಸ್ಕೃತಿಗಾಗಿ ದುಡಿದ 15 ಮಂದಿ ಮಹನೀಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಸಮಾರೋಪ ಸಮಾರಂಭದಲ್ಲಿ ಗೌರವಿಸಲಾಗುತ್ತದೆ. ಈ ಗೌರವವು 25,000 ರೂ. ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.

ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷರ ಜೊತೆಗೆ ಸಾರ್ವಜನಿಕರಿಗೆ ಮುಕ್ತ ಸಂವಾದ ನಡೆಸುವ ಅವಕಾಶಗಳನ್ನು ಡಾ.ವಿ.ಎಸ್.ಆಚಾರ್ಯ ಸಭಾಂಗಣದ ಹರೀಶ್ ಆರ್.ಭಟ್ ವೇದಿಕೆಯಲ್ಲಿ ಏರ್ಪಡಿಸಲಾಗಿದೆ. ಡಿ.2ರಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಡಿ.3ರಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ್ ಆಳ್ವರ ಜೊತೆ ಬೆಳಗ್ಗೆ 7.05ರಿಂದ 8 ಗಂಟೆಯವರೆಗೆ ಸಂವಾದ ನಡೆಯಲಿದೆ.

2 ಕಡೆಗಳಲ್ಲಿ ಭೋಜನ ತಯಾರಿ: ಈ ವರ್ಷ ಪ್ರತಿ ದಿನ 1.50 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಊಟೋಪಚಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಕ್ಕೆ ಎರಡು ಕಡೆ ಭೋಜನದ ತಯಾರಿ ಮಾಡಲಾಗುತ್ತದೆ.

ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳಿಂದಲೇ ನಡೆಯುವ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ’ಯು ನ.30ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಶೆಣೈಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪ್ರಸಿದ್ಧ ರಂಗಕರ್ಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಡಾ.ಮೋಹನ್ ಆಳ್ವ ತಿಳಿಸಿದರು.

ಗಣೇಶ್ ಸೋಮಯಾಜಿ ಸಂಪತ್ ಸಾಮ್ರಾಜ್ಯ, ಪ್ರಕಾಶ್ ಕರ್ಕೇರಾ, ಯಜ್ಞ ಮಂಗಳೂರು, ಜಾನ್ ರೆಬೆಲ್ಲೋ, ವೇಣುಗೋಪಾಲ್ ಶೆಟ್ಟಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.