ಕರಾವಳಿ

ಕಲಾವಿದರು ಅಳಿದರೂ ಅವರ ಕಲಾವಂತಿಕೆ ಎಂದೆಂದಿಗೂ ಶಾಶ್ವತ :ಎಸ್. ಎಸ್. ನಾಯಕ್ ಅಭಿಮತ

Pinterest LinkedIn Tumblr

ಮಂಗಳೂರು : ‘ಕಲೆಯ ವಿವಿಧ ಪ್ರಕಾರಗಳು ಇಂದಿಗೂ ಜನಾಕರ್ಷಣೆ ಉಳಿಸಿಕೊಳ್ಳಲು ಕಾರಣವಾದವರು ಆಯಾಯ ಕಲೆಗಾರಿಕೆಯಲ್ಲಿ ಮೆರೆದ ಪ್ರತಿಭಾವಂತರಾದ ಕಲಾವಿದರು. ಅಂಥವರ ಸಾಧನೆಯನ್ನು ಸ್ಮರಿಸುವ ಕಾರ್ಯಕ್ರಮ ಸ್ತುತ್ಯ. ಕಲಾವಿದರು ಅಳಿದರೂ ಅವರ ಕಲಾವಂತಿಕೆ ಎಂದೆಂದಿಗೂ ಹಸನಾಗಿಯೇ ಉಳಿಯುತ್ತದೆ’ ಎಂದು ಹಿರಿಯ ಲೆಕ್ಕ ಪರಿಶೋಧಕ ಎಸ್. ಎಸ್. ನಾಯಕ್ ಹೇಳಿದ್ದಾರೆ.

‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಪುತ್ತೂರಿನ ಕರ್ನಾಟಕ ಯಕ್ಷಭಾರತಿ ಸಂಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ-ಪಂಚಮ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದ ಐದನೇ ದಿನ ಮಂಗಳೂರು ಪುರಭವನದಲ್ಲಿ ಜರಗಿದ ಯಕ್ಷಗಾನ ಭಾಗವತ ದಿ| ಬಿ. ವಿ. ದಾಮೋದರ ಆಚಾರ್ಯ ಬಂಟ್ವಾಳ ಅವರ ಸಂಸ್ಮರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬಿ. ಬಾಲಕೃಷ್ಣ ಆಚಾರ್ಯ ಹರೇಕಳ ನುಡಿನಮನ ಸಲ್ಲಿಸಿದರು. ಹಿರಿಯ ಭಾಗವತ ಅಗರಿ ರಘುರಾಮ ಭಾಗವತರು ಮತ್ತು ಬಜ್ಪೆ ಶ್ರೀ ಶನೈಶ್ವರ ದೇವಸ್ಥಾನದ ಧರ್ಮದರ್ಶಿ ಆನಂದ ಪೂಜಾರಿ ದೀಪ ಪ್ರಜ್ವಲನೆ ಮಾಡಿದರು.

ಶ್ರೀಧರ ಐತಾಳ್ ಸಮ್ಮಾನ :

ಇದೇ ಸಂದರ್ಭದಲ್ಲಿ ಯಕ್ಷಗಾನ ನಾಟ್ಯಗುರು ಪಣಂಬೂರು ಶ್ರೀಧರ ಐತಾಳ್ ಅವರಿಗೆ ಬಿ. ವಿ. ದಾಮೋದರ ಆಚಾರ್ಯ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎ. ಶಿವಾನಂದ ಕರ್ಕೇರ ಅಭಿನಂದಿಸಿದರು.

ಕೆ. ಲಕೀನಾರಾಯಣ ರೈ ಹರೇಕಳ ಸನ್ಮಾನಪತ್ರ ವಾಚಿಸಿದರು. ದಿ| ದಾಮೋದರ ಆಚಾರ್ಯರ ಪತ್ನಿ ಲೀಲಾವತಿ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು.

ಕಮಲಜಿತ್ ಕನ್‌ಸ್ಟ್ರಕ್ಷನ್ ಆಡಳಿತ ನಿರ್ದೇಶಕ ಪ್ರದೀಪ ಕುಮಾರ್ ಶೆಟ್ಟಿ ಎ, ಯಮುನಾ ಬಿಲ್ಡರ್ಸ್‌ನ ಎನ್. ಪುರುಷೋತ್ತಮ ಶೆಟ್ಟಿ, ಅಳಿಕೆ ಯಕ್ಷ ಪ್ರತಿಷ್ಠಾನದ ಸಂಚಾಲಕ ಅಳಿಕೆ ದುರ್ಗಾಪ್ರಸಾದ ರೈ ಅಳಪೆ ಮುಖ್ಯ ಅತಿಥಿಗಳಾಗಿದ್ದರು. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆವಹಿಸಿದ್ದರು.

ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ನಿವೇದಿತಾ ಎನ್ ಶೆಟ್ಟಿ ವಂದಿಸಿದರು. ಶೋಭಾ ಕೇಶವ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭಾಗವತ ಜಯಂತ ಕುಮಾರ್ ತೋನ್ಸೆ ಅವರ ಬಡಗು ಹಿಮ್ಮೇಳದಲ್ಲಿ ‘ರಾಧೇಯ’ ಯಕ್ಷಗಾನ ತಾಳಮದ್ದಳೆ ಜರಗಿತು.

Comments are closed.