ಕರಾವಳಿ

ಸಾರ್ವಜನಿಕರನ್ನು ವಂಚಿಸುವ ನಕಲಿ ಜ್ಯೋತಿಷಿಗಳ ವಿರುದ್ಧ ಕ್ರಮ : ಪೊಲೀಸ್ ಕಮಿಷನರ್ ಎಚ್ಚರಿಕೆ

Pinterest LinkedIn Tumblr

ಮಂಗಳೂರು, ನವೆಂಬರ್.25: ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ನಕಲಿ ಜ್ಯೋತಿಷಿಗಳ ವಂಚನೆಗಳ ಬಗ್ಗೆ ಸಾರ್ವಜನಿಕರೊಬ್ಬರು ಅಯುಕ್ತರಿಗೆ ದೂರು ನೀಡಿದ್ದಾರೆ.

ದಾಂಪತ್ಯ ಕಲಹ, ವಶೀಕರಣ, ಪ್ರೇತಭಾದೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ನಾಮಫಲಕ ಹಾಕಿ ಮತ್ತು ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ದೂರಿಗೆ ಅವರು ಪ್ರತಿಕ್ರಿಯಿಸಿದ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರು, ಜಾಹೀರಾತು ನೀಡಿ ಅಮಾಯಕರನ್ನು ವಂಚಿಸುವ ನಕಲಿ ಜ್ಯೋತಿಷಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ವಂಚನೆ ಪ್ರಕರಣ ದಾಖಲಿಸಿ ಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಬಳ್ಳಾಲ್ ಭಾಗ್ ನಲ್ಲಿ ಆಟೋ ರಿಕ್ಷಾ ನೋ ಪಾರ್ಕಿಂಗ್ ಜಾಗದಲ್ಲಿದೆ. ಪಾರ್ಕಿಂಗ್ ಜಾಗವನ್ನು ಸ್ಥಳೀಯ ಕಟ್ಟಡದವರು ಆಕ್ರಮಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, ಸ್ಥಳ ಪರಿಶೀಲಿಸಿ ಫೋಟೊ ಸಮೇತ ಪಾಲಿಕೆ ವರದಿ ನೀಡುವಂತೆ ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿಗೆ ಸೂಚಿಸಿದರು.

ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಲು 2 ಕೋಟಿ ರೂ. ಮಂಜೂರಾಗಿದ್ದು, ಈ ಪೈಕಿ 50 ಲಕ್ಷ ರೂ. ಬಿಡುಗಡೆಗೊಂಡು ಟೆಂಡರ್ ಆಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಸಿಸಿ ಕ್ಯಾಮರಾ, ರಿಪ್ಲೆಕ್ಟರ್, ಜಂಕ್ಷನ್ ಅಭಿವೃದ್ಧಿ, ಕೋನ್ಸ್ ಅಳವಡಿಕೆ ಕಾಮಗಾರಿ ಪ್ರಾರಂಭ ಗೊಳ್ಳಲಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ತಿಳಿಸಿದರು.

Comments are closed.