ಕರಾವಳಿ

ಟಿಪ್ಪು ಜಯಂತಿ ಆಚರಣೆಗೆ ಕೆನರಾ ಕ್ರೈಸ್ತ ಸಮುದಾಯ ಆಕ್ರೋಶ -ಐವನ್, ಲೋಬೋ, ಆಸ್ಕರ್ ವಿರುದ್ಧ ಕಿಡಿ

Pinterest LinkedIn Tumblr

ಮಂಗಳೂರು,ನವೆಂಬರ್ 10 : ರಾಜ್ಯ ಸರ್ಕಾರ ಟಿಪ್ಪುಸುಲ್ತಾನ ಜಯಂತಿ ಆಚರಣೆಗೆ ಮುಂದಾಗಿರುವುದರ ವಿರುದ್ಧ ಕೆನರಾ ಕ್ರೈಸ್ತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆನರಾ ಕ್ರೈಸ್ತ ಸಂತ್ರಸ್ತರ ಸಮಿತಿಯ ಸಂಚಾಲಕ ರಾಬರ್ಟ್ ರೊಜಾರಿಯೋ ಅವರು, ಟಿಪ್ಪುವಿನ ಕ್ರೌರ್ಯಕ್ಕೆ ಗುರಿಯಾಗಿ ನಲುಗಿಹೋಗಿರುವ ಕ್ರೈಸ್ತರ ಭಾವನೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದೇ ಹಠಮಾರಿತನ ತೋರಿ ಟಿಪ್ಪು ಜಯಂತಿ ಆಚರಿಸುತ್ತಿದೆ. ಟಿಪ್ಪು ಜಯಂತಿ ಆಚರಿಸುವ ಮೂಲಕ ಟಿಪ್ಪುವಿನ ಕ್ರೌರ್ಯದಿಂದ ಸಂತ್ರಸ್ತರಾದ ಕೆನರಾ ಕ್ರೈಸ್ತ ಸಮುದಾಯದವರ ಗಾಯಗಳಿಗೆ ಉಪ್ಪು ಎರಚುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

ಕೆನರಾ ಕ್ರೈಸ್ತರ ಮೇಲೆ ಟಿಪ್ಪು ನಡೆಸಿದ ದೌರ್ಜನ್ಯದ ಬಗ್ಗೆ ದಾಖಲೆಗಳಿವೆ. ಟಿಪ್ಪು ಕ್ರೌರ್ಯಕ್ಕೆ ಬಲಿಯಾದವರ ಬಗ್ಗೆ ಮಹಾ ಪ್ರಬಂಧ ಬರೆದು ಕ್ರೈಸ್ತ ಧರ್ಮ ಗುರುಗಳೇ ಪಿಎಚ್.ಡಿ ಪಡೆದಿದ್ದಾರೆ ಎಂದು ತಿಳಿಸಿದರು.ಟಿಪ್ಪುವಿನ ಕ್ರೌರ್ಯ ಕಟ್ಟುಕತೆಯಲ್ಲ, ಅತ್ಯಘಟನೆ ಎಂದು ಹೇಳಿದ ಅವರು ಕೆನರಾ ಕ್ರೈಸ್ತರ ಬಂಧನ, ಹತ್ಯಾಕಾಂಡದ ಬಗ್ಗೆ ಇತಿಹಾಸ ದಾಖಲೆಗಳನ್ನು ಆಧರಿಸಿ ಚಲನಚಿತ್ರ ನಿರ್ಮಿಸುವುದಾಗಿ ಹೇಳಿದ ಅವರು ಕ್ರೈಸ್ತ ಸಮುದಾಯದ ಸದಸ್ಯರಿಂದ ಚಂದಾ ಎತ್ತಿ ಚಲನಚಿತ್ರ ನಿರ್ಮಿಸುವುದಾಗಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡರು ದುಃಖತಪ್ತ ಸಮುದಾಯದ ಜತೆ ನಿಲ್ಲದೆ ಹತ್ಯಾಕಾಂಡ ನಡೆಸಿದ ಟಿಪ್ಪುವನ್ನು ವಿಜೃಂಬಿಸುತ್ತಿರುವ ಸರ್ಕಾರದ ಜತೆ ನಿಂತಿರುವುದು ದುರಂತ. ಟಿಪ್ಪುವಿನ ಕ್ರೌರ್ಯಕ್ಕೆ ಒಳಗಾದ ಕೆನರಾ ಕ್ರೈಸ್ತ ಸಮುದಾಯದಿಂದಲೇ ಬಂದಿರುವ ಶಾಸಕ ಜೆ.ಆರ್ ಲೊಬೊ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಇದಕ್ಕೆ ಉತ್ತರ ನೀಡಬೇಕು ಎಂದು ರಾಬರ್ಟ್ ರೊಸಾರಿಯೋ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಅಗಸ್ಟಿನ್ ರೊಡ್ರಿಗಸ್, ಜೆರಾಡ್ ಟವರ್, ಬಟ್ರಮ್ ಪಿಂಟೋ, ಗಿಲ್ಬರ್ಟ್ ಡಿ’ಸಿಲ್ವಾ ಮುಂತಾದವರು ಉಪಸ್ಥಿತರಿದ್ದರು.

Comments are closed.