ಕರಾವಳಿ

ಯಕ್ಷಗಾನ ತಾಳಮದ್ದಳೆ ಸಪ್ತಾಹ ಆಮಂತ್ರಣಪತ್ರಿಕೆ ಬಿಡುಗಡೆ -ಯಕ್ಷಾಂಗಣದಿಂದ ಸಾರ್ಥಕ ನುಡಿಸೇವೆ: ರಮಾನಾಥ ಹೆಗ್ಡೆ

Pinterest LinkedIn Tumblr

ಮಂಗಳೂರು: ‘ಕಳೆದ ನಾಲ್ಕೈದು ವರ್ಷಗಳಿಂದ ನಗರದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ನಡೆಸುವುದರ ಮೂಲಕ ಯಕ್ಷಾಂಗಣ ಸಂಸ್ಥೆ ಕನ್ನಡ ಜಾಗೃತಿಯನ್ನುಂಟುಮಾಡಿದೆ. ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಸಾರುವ ಯಕ್ಷಗಾನದ ವಾಚಿಕ ವಿಭಾಗವನ್ನು ರಂಗದಲ್ಲಿ ಮೆರೆಸಿ ಆ ಮೂಲಕ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ನಿಜಕ್ಕೂ ಒಂದು ಸಾರ್ಥಕ ನುಡಿಸೇವೆ ‘ ಎಂದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳ್ತೆ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಹೇಳಿದ್ದಾರೆ.

‘ ಯಕ್ಷಾಂಗಣ ಮಂಗಳೂರು ‘ ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ಯಕ್ಷಭಾರತಿ ಪುತ್ತೂರು -ಇದರ ಸಹಯೋಗದಲ್ಲಿ ನವೆಂಬರ19 ರಿಂದ 25 ರ ವರೆಗೆ ಮಂಗಳೂರು ಪುರಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮವಾಗಿ ಆಯೋಜಿಸಿರುವ *’ಯಕ್ಷಗಾನ ತಾಳಮದ್ದಳೆ ಸಪ್ತಾಹ – 2017’*ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಅವರು ಶುಭ ಹಾರೈಸಿದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ‘ಪಂಚಮ ವರ್ಷದ ನುಡಿಹಬ್ಬ ಎಂಬ ಘೋಷಣೆಯೊಂದಿಗೆ ಸಂಯೋಜಿಸಲಾಗಿರುವ ಈ ಬಾರಿಯ ತಾಳಮದ್ದಳೆ ಸಪ್ತಾಹದಲ್ಲಿ ಕಲಾಭಿಮಾನಿಗಳಿಗೆ ಆಯ್ದ ಪೌರಾಣಿಕ ಪ್ರಸಂಗಗಳ ರಸಾನುಭವವನ್ನು ನೀಡುವ ಜತೆಗೆ ಸಾಧಕರ ಸಮ್ಮಾನ, ಯಕ್ಷಗಾನ ಕೃತಿಗಳ ಲೋಕಾರ್ಪಣೆ ಹಾಗೂ ಗತಿಸಿದ ಹಿರಿಯರ ಸಂಸ್ಮರಣೆಯನ್ನೊಳಗೊಂಡ ತ್ರಿವಳಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಕೃತಿ ಪ್ರಿಯರು ಬೆಂಬಲಿಸಬೇಕು’ ಎಂದು ಕೋರಿದರು.

ಬೋಳಾರ ನಾರಾಯಣ ಶೆಟ್ಟಿ ಯಕ್ಷ ಪ್ರತಿಷ್ಠಾನದ ಸಂಚಾಲಕ ಬೋಳಾರ ಕರುಣಾಕರ ಶೆಟ್ಟಿ ದೋಹ-ಕತಾರ್ ಮತ್ತು ಉದ್ಯಮಿ ದಿವಿನ್ ಮೇಂಡ ಮುಖ್ಯ ಅತಿಥಿಗಳಾಗಿದ್ದರು. ಯಕ್ಷಾಂಗಣದ ಪದಾಧಿಕಾರಿಗಳಾದ ವಾಸುದೇವ ಆರ್.ಕೊಟ್ಟಾರಿ, ಅಶೋಕ್ ಮಾಡ ಕುದ್ರಾಡಿಗುತ್ತು, ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ,ಮಧುಸೂದನ ಅಲೆವೂರಾಯ, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಶಮೀನಾ ಆಳ್ವ ಮೂಲ್ಕಿ, ನಿವೇದಿತಾ ಯನ್.ಶೆಟ್ಟಿ, ಶೋಭಾ ಕೇಶವ ಕಣ್ಣೂರು ಉಪಸ್ಥಿತರಿದ್ದರು.

ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸ್ಮಾರಕ ಸಮಿತಿ ಅಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ಸ್ವಾಗತಿಸಿದರು. ಯಕ್ಷಾಂಗಣದ ಸಂಚಾಲಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ವಂದಿಸಿದರು.

Comments are closed.