ಕರಾವಳಿ

ಗಂಗೊಳ್ಳಿ : ಸಮುದ್ರ ಮಧ್ಯೆ ಟ್ರಾಲ್ ಬೋಟ್ ಬೆಂಕಿಗಾಹುತಿ – ಹತ್ತು ಮಂದಿಯ ರಕ್ಷಣೆ

Pinterest LinkedIn Tumblr

ಮಂಗಳೂರು / ಗಂಗೊಳ್ಳಿ, ನವೆಂಬರ್ .8 : ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್‌ ಗಂಗೊಳ್ಳಿಯಲ್ಲಿ ಬೆಂಕಿ ಅವಘಡಕ್ಕೆ ತುತ್ತಾಗಿದ್ದು, ಪರಿಣಾಮ ಸಮುದ್ರ ಮಧ್ಯೆಯೇ ಸುಟ್ಟು ಬೂದಿಯಾದ ಘಟನೆ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಮಂಗಳೂರಿನ ಬಜಾಲ್ ನಿವಾಸಿ ಐರಲ್ ಜೆಸ್ವಿ ಎಂಬವರಿಗೆ ಸೇರಿದ ‘ಮೀನ’ ಎಂಬ ಹೆಸರಿನ ಈ ಬೋಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಅವಘಡದಿಂದ ಅದರಲ್ಲಿ ತರುತ್ತಿದ್ದ ಮೀನುಗಳು ಸೇರಿದಂತೆ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ಸಂಜೆ ಮೀನುಗಾರಿಕೆಗೆ ಹತ್ತು ಜನರ ತಂಡ `ಮೀನ’ ಬೋಟಿನಲ್ಲಿ ತೆರಳಿದ್ದರು. ಮೀನು ತುಂಬಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಸುಮಾರು 30-40 ನಾಟಿಕಲ್ ಮೈಲಿನಲ್ಲಿ ( ಗಂಗೊಳ್ಳಿ ಸಮೀಪ) ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟ ವಶಾತ್‌ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ ಬೋಟಿನಲ್ಲಿದ್ದ ಹತ್ತು ಜನ ಸಿಬ್ಬಂದಿಯನ್ನು ರೈಸಿಂಗ್ ಲಾರ್ಡ್ ಹೆಸರಿನ ಇನ್ನೊಂದು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.

ಬೆಂಕಿಗಾಹುತಿಯಾದ ಬೋಟನ್ನು ಮಂಗಳೂರಿನ ಧಕ್ಕೆಗೆ ಎಳೆದು ತರಲಾಗಿದೆ. ಈ ಅವಘಡದಿಂದ ಸುಮಾರು 50 ಲಕ್ಷ ರು. ನಷ್ಟವಾಗಿದೆ ಎಂದು ತಿಳಿದು ಬಂದಿದೆ.

Comments are closed.