ಮನೋರಂಜನೆ

ಕಿರುತೆರೆಯ ಹಳೆಯ ದಿನಗಳನ್ನು ನೆನೆದ ಸ್ಮೃತಿ ಇರಾನಿ

Pinterest LinkedIn Tumblr


ಮಾಜಿ ಮಿಸ್ ಇಂಡಿಯಾ ಸ್ಪರ್ಧಿ, ಒಂದು ಕಾಲದ ಕಿರುತೆರೆ ತಾರೆ, ಹಾಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಈಗ ಜನಪ್ರಿಯ ರಾಜಕಾರಣಿ. ರಾಜಕೀಯಕ್ಕೆ ಅಡಿಯಿಡುವುದಕ್ಕೂ ಮುನ್ನ ಅವರು ‘ಕ್ಯೂಂಕಿ ಸಾಸ್ ಬಿ ಕಭಿ ಬಹೂ ಥಿ’ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿರುವ ಸಂಗತಿ.

ಆ ಧಾರಾವಾಹಿಗೆ ಆಯ್ಕೆಯಾಗಿದ್ದು, ಆ ಮೂಲಕ ರಾಜಕೀಯಕ್ಕೆ ಅಡಿಯಿಟ್ಟಿದ್ದು ಹೇಗೆ ನಡೆಯಿತು ಎಂಬುದನ್ನು ಅವರು ಐಟಿಎ (ಇಂಡಿಯನ್ ಟೆಲಿವಿಷನ್ ಅವಾರ್ಡ್ಸ್) ಕಾರ್ಯಕ್ರಮದಲ್ಲಿ ತಿಳಿಸಿದರು. ತಮ್ಮ ಆ ದಿನಗಳನ್ನು ಅವರು ನೆನಪಿಸಿಕೊಂಡಿದ್ದು ಹೀಗೆ…

’20 ವರ್ಷಗಳಿಂದ ನನಗೆ ಕಿರುತೆರೆ ಜತೆಗೆ ನಂಟಿದೆ. ರಾಜಕೀಯಕ್ಕೆ ಅಡಿಯಿಡಲು ನನಗೆ ಕಿರುತೆರೆ ಸಹಕಾರಿಯಾಯಿತು. ‘ಕ್ಯೂಂಕಿ’ ಧಾರಾವಾಹಿಯಲ್ಲಿ ನಟಿಸಲು ಬಹಳಷ್ಟು ಮಂದಿ ಹುಡುಗಿಯರು ಆಡಿಷನ್‌ಗೆ ಬಂದಿದ್ದರು. ಆದರೆ ನಿರ್ಮಾಪಕಿ ಏಕ್ತಾ ಕಪೂರ್ ಅವರೆಲ್ಲರಲ್ಲಿ ನನ್ನನ್ನೇ ಗುರುತಿಸಿ ಆಯ್ಕೆ ಮಾಡಿದ್ದರು. ಕಿರುತೆರೆಗೆ ನಾನು ಸರಿಹೊಂದಲ್ಲ ಎಂದು ಏಕ್ತಾ ಅವರ ತಂಡ ವಿರೋಧ ವ್ಯಕ್ತಪಡಿಸಿತ್ತು. ಆದರೂ ಏಕ್ತಾ ನನ್ನ ಮೇಲೆ ನಂಬಿಕೆ ಇಟ್ಟರು’ ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

‘2007ರಲ್ಲಿ ಐಟಿಎ ಪ್ರಶಸ್ತಿ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಕೆಲಸ ಮಾಡಿದ್ದೇನೆ. ಆ ಕಾರ್ಯಕ್ರಮಕ್ಕೆ ಅಂದಿನ ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವರನ್ನು ನಾನು ವೇದಿಕೆಗೆ ಆಹ್ವಾನಿಸಿದ್ದೆ. ಆದರೆ ನನ್ನ ಜೀವನ ಹೇಗೆಲ್ಲಾ ಬದಲಾಯಿತು ಎಂದರೆ, ನಾನೇ ಈಗ ಆ ಖಾತೆಯ ಸಚಿವೆಯಾಗಿದ್ದೇನೆ. ಆ ಪದವಿಯಲ್ಲಿದ್ದಾಗ ಬೇರೆ ನಿರೂಪಕಿ ವೇದಿಕೆಗೆ ಆಹ್ವಾನಿಸಿದ್ದಾರೆ’ ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಸ್ಮೃತಿ ಇರಾನಿ.

Comments are closed.