ಮಂಗಳೂರು, ನವೆಂಬರ್.7: ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ ರೋಡಿನ ಕೋಟೆಕಾರ್ ಸಹಕಾರಿ ಬ್ಯಾಂಕ್‌ನ ಮೂವರು ಸೆಕ್ಯುರಿಟಿ ಸಿಬ್ಬಂದಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಮೃತರನ್ನು ಸೋಮನಾಥ್, ಉಮೇಶ್, ಸಂತೋಷ್ ಎಂದು ಗುರುತಿಸಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲವಾದರೂ ನಿನ್ನೆ ರಾತ್ರಿ ಈ ಭಾಗದಲ್ಲಿ ಸಿಡಿಲು-ಮಿಂಚು ಅಬ್ಬರ ಜೋರಾಗಿದ್ದು ಸಿಡಿಲು ಬಡಿದು ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.
ಇನ್ನೊಂದು ಮೂಲದ ಪ್ರಕಾರ ನಿನ್ನೆ ರಾತ್ರಿ ಸಿಡಿಲು ಮಳೆಗೆ ವಿದ್ಯುತ್ ಕೈಕೊಟ್ಟ ವೇಳೆ ಜನರೇಟರ್ ಆನ್ ಮಾಡಿ ಮಲಗಿದ ಕಾರಣ ಅದರಿಂದ ಹೊರ ಬಂದ ವಿಷ ಗಾಳಿ (ಕಾರ್ಬನ್ ಮೊನೋಕ್ಸೈಡ್ )ಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಮೇಲ್ನೋಟಕ್ಕೆ ಉಸಿರುಗಟ್ಟಿಸಿ ಕೊಲ್ಲಲಾಗಿರುವುದಾಗಿ ಕಂಡು ಬರುತ್ತಿದ್ದರೂ ತನಿಖೆ ಪೂರ್ಣವಾಗುವವರೆಗೆ ಏನೂ ಹೇಳಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಸೋಮನಾಥ್, ಉಮೇಶ್, ಸಂತೋಷ್ ಎಂಬವರು ರಾತ್ರಿ ಪಾಳಿಯಲ್ಲಿ ಸೆಕ್ಯುರಿಟಿ ಕೆಲಸ ನಿರ್ವಹಿಸುತ್ತಿದ್ದು ನಿನ್ನೆಯೂ ಮೂವರು ಕೆಲಸಕ್ಕೆ ಹಾಜರಾಗಿದ್ದರು. ಇಂದು ಮುಂಜಾನೆ ಸ್ಥಳೀಯರೋರ್ವರಿಗೆ ಮೂರೂ ಮಂದಿ ನೆಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೂಡಲೇ ಉಳ್ಳಾಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸಿಸಿ ಕೆಮರಾ ಫುಟೇಜ್ ಪರಿಶೀಲನೆ ನಡೆಸಲಾಗುತ್ತಿದ್ದು, ಘಟನೆಯ ಹಿನ್ನೆಲೆ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಪೊಲೀಸರ ತನಿಖೆಯ ನಂತರವಷ್ಟೆ ನಿಜಾಂಶ ಹೊರಬೀಳಲಿದೆ.
ಆತಂಕದಲ್ಲಿ ಪಟ್ಟಣದ ಜನತೆ :
ಬ್ಯಾಂಕ್ ಕಾವಲು ಸಿಬ್ಬಂದಿ ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬ್ಯಾಂಕ್ ಕಡೆಗೆ ಧಾವಿಸಿ ಬಂದಿದ್ದಾರೆ. ಬ್ಯಾಂಕ್ ಕಾವಲು ಸಿಬ್ಬಂದಿಗೆ ಎರಗಿದ ಈ ದುರ್ಘಟನೆಯಿಂದ ಪಟ್ಟಣದ ಜನತೆ ಆತಂಕಗೊಂಡಿದ್ದಾರೆ. ನಗರದ ಉಳಿದ ಬ್ಯಾಂಕುಗಳ ಕಾವಲು ಸಿಬ್ಬಂದಿ ಸಹ ಆತಂಕಗೊಂಡಿದ್ದಾರೆ.
ದರೋಡೆಗೆ ವಿಫಲ ಯತ್ನ :
ಬ್ಯಾಂಕ್‌ನಲ್ಲಿ ದರೋಡೆ ನಡೆದ ಬಳಿಕ ರಾತ್ರಿ ಪಾಳಿಯಲ್ಲಿ ಇಬ್ಬರು ಕಾವಲುಗಾರರನ್ನು ನೇಮಿಸಿಕೊಳ್ಳಲಾಗಿತ್ತು. ಈ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ಈ ಹಿಂದೆ ಜೂನ್ 23 ರಂದು ಚಿನ್ನಾಭರಣ ದರೋಡೆಗೆ ವಿಫಲ ಯತ್ನ ನಡೆದಿತ್ತು .ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದರೋಡೆಕೋರರು ಗುರುತು ಸಿಗದಂತೆ ಹೆಲ್ಮೆಟ್ ಧರಿಸಿ ಸಹಕಾರಿ ಬ್ಯಾಂಕ್‌ಗೆ ನುಗ್ಗಿ ಚಿನ್ನಾಭರಣ ದರೋಡೆಗೆ ಯತ್ನ ನಡೆಸಿದ್ದರು.
ಬ್ಯಾಂಕ್ ಸಿಬ್ಬಂದಿಗೆ ಬೆದರಿ ಕಳ್ಳರು ಪರಾರಿ ಮಾರಕಾಸ್ತ್ರಗಳನ್ನು ತೋರಿಸಿ ಸಹಕಾರಿ ಬ್ಯಾಂಕ್ ನ ನೌಕರರನ್ನು ಶೌಚಾಲಯದಲ್ಲಿ ಬಂಧಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದನ್ನು ದೋಚಿ ಪರಾರಿಯಾಗಲು ಯತ್ನಿಸಿದ್ದರು. ಆದರೆ ಆ ಸಂದರ್ಭದಲ್ಲಿ ಬಾಗಿಲು ಒಡೆದುಕೊಂಡು ಹೊರಗೆ ಬಂದ ಬ್ಯಾಂಕ್ ನೌಕರರು ದರೋಡೆಕೋರರ ಮೇಲೆ ಕಲ್ಲು ತೂರಾಟ ನಡೆಸಿದ್ದರು ಇದರಿಂದ ಬೆದರಿದ ದರೋಡೆಕೋರರು ಚಿನ್ನಾಭರಣ ತುಂಬಿದ್ದ ಮೂಟೆಯನ್ನು ಸ್ಥಳದಲ್ಲಿ ಬಿಟ್ಟು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು.
ಈ ಹಿಂದೆ ಕಳ್ಳತನಕ್ಕೆ ಯತ್ನಿಸಿದ್ದ ಕಳ್ಳರ ತಂಡವೇ ಮತ್ತೆ ದಾಳಿ ನಡೆಸಿ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ. ಈ ಮುಂಚೆ ತಮ್ಮ ಸಂಚು ವಿಫಲ ಗೊಳಿಸಿದ್ದರಿಂದ ಕಳ್ಳರು ಸೇಡು ತೀರಿಸಿಕೊಂಡಿದ್ದಾರೆ ಎಂಬ ಊಹಾಪೋಹಗಳು ಸಾರ್ವಜನಿಕರ ಮಧ್ಯೆ ಹರಿದಾಡುತ್ತಿದೆ. ಪೊಲೀಸರ ತನಿಖೆಯ ನಂತರವಷ್ಟೆ ನಿಜಾಂಶ ಬಯಲಾಗಲಿದೆ.