ಕರಾವಳಿ

ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ : ಓರ್ವ ಮೃತ್ಯು – ಇನ್ನೋರ್ವ ಗಂಭೀರ

Pinterest LinkedIn Tumblr

ಮಂಗಳೂರು, ನವೆಂಬರ್.5: ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ತೊಕ್ಕೊಟ್ಟು ಹೆದ್ದಾರಿ ಬಳಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಬಜಾಲ್ ನಿವಾಸಿ ಜೀವನ್ ಎಂದು ಗುರುತಿಸಲಾಗಿದೆ. ರಾಜೇಶ್ ಎಂಬಾತ ಗಾಯಗೊಂಡಿದ್ದು, ಅಸ್ಪತ್ರೆಗೆ ದಾಖಲಿಸಲಾಗಿದೆ.

ಬಜಾಲ್ ನಿವಾಸಿಗಳಾದ ಜೀವನ್ ಮತ್ತು ರಾಜೇಶ್ ಎಂಬವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಲಾರಿ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಲಾರಿನಡಿಗೆ ಸಿಲುಕಿಕೊಂಡಿದ್ದು, ಗಂಭೀರ ಗಾಯಗೊಂಡ ಇಬ್ಬರು ಸವಾರರ ಪೈಕಿ ಜೀವನ್ ಮೃತಪಟ್ಟಿದ್ದಾರೆ ಎಂದು ಉಳ್ಳಾಲ ಠಾಣಾ ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಜನರು ರಸ್ತೆಯ ಅವ್ಯವಸ್ತೆಯ ವಿರುದ್ಧ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ಸಾರ್ವಜನಿಕರು ಸೇರಿದ್ದರಿಂದ ಸುಮಾರು ಅರ್ಧ ಗಂಟೆ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ತೊಕೊಟ್ಟು ಬಳಿ ಶುಕ್ರವಾರ ರಾತ್ರಿ ನಡೆದ ಅಪಘಾತಕ್ಕೆ ನವಯುಗ್ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಸಚಿವ ಯು.ಟಿ ಖಾದರ್ ಅವರು ಈ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ತೊಕೊಟ್ಟು ಬಳಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಕಾಮಗಾರಿ ವಿಳಂಭವಾಗುತ್ತಿದೆ ಈ ಬಗ್ಗೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಈ ಹಿಂದೆ ಹಲವು ಬಾರಿ ನಿರ್ಮಾಣ ಸಂಸ್ಥೆಗೆ ಸೂಚಿಸಿದ್ದೆವು. ಅಲ್ಲದೆ ಇದಕ್ಕೆ ಸಂಬಂಧಿಸಿ ಚರ್ಚಿಸಲು ಸಭೆಯನ್ನೂ ಕರೆಯಲಾಗಿತ್ತು. ಆದರೆ ನಿರ್ಮಾಣ ಸಂಸ್ಥೆಯವರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಆದ್ದರಿಂದ ಇಂದು ನಡೆದ ಅಪಘಾತಕ್ಕೆ ನವಯುಗ್ ನಿರ್ಮಾಣ ಸಂಸ್ಥೆಯೇ ಹೊಣೆಯಾಗಿದೆ ಎಂದು ಖಾದರೆ ತಿಳಿಸಿದ್ದಾರೆ.

Comments are closed.