ಕರಾವಳಿ

ಮಂಗಳೂರು ಪಾಲಿಕೆ ಸಭೆಯಲ್ಲಿ ಸದಸ್ಯರ ಮಾರಾಮಾರಿ : ಕಣ್ಣೀರಿಟ್ಟು ಸಭೆಯಿಂದ ಹೊರ ನಡೆದ ಮೇಯರ್ ಕವಿತಾ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 31: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರು ತಮ್ಮ ಅಪಾರ್ಟ್‌ಮೆಂಟ್‌ನ ವಾಚ್‌ಮೆನ್‌ನ ಹೆಂಡತಿ ಹಾಗೂ ಮಗುವಿಗೆ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಂಗಳವಾರ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರ ಮಧ್ಯೆ ಮಾರಾಮಾರಿ ನಡೆದ ಘಟನೆ ನಡೆದಿದೆ.

ಇದೇ ಸಂದರ್ಭದಲ್ಲಿ ಪ್ರತಿಪಕ್ಷದ ಆರೋಪಗಳಿಗೆ ಮೇಯರ್ ಅವರಿಗೆ ಪ್ರತಿಕ್ರಿಯೆ ನೀಡಲು ಅವಕಾಶ ಕೊಡದೆ ವಿರೋಧ ಪಕ್ಷದ ಸದಸ್ಯರು ಮೇಯರ್ ವಿರುದ್ಧ ವಾಗ್ದಾಳಿ ನಡೆಸಿದ್ದರಿಂದ ಮೇಯರ್ ಕಣ್ಣೀರಿಟ್ಟು ಸಭೆಯಿಂದ ಅರ್ಧದಲ್ಲೇ ಹೊರ ನಡೆದ ಪ್ರಸಂಗವೂ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ಕವಿತಾ ಸನಿಲ್ರವರು ವಿವಿಧ ಸ್ಥಾಯಿ ಸಮಿತಿಗಳ ನಡವಳಿಗಳನ್ನು ಸ್ಥೀರಿಕರಿಸಿ, ಪಾಲಿಕೆಯಲ್ಲಿ ಕೆಲವು ಸಾರ್ವಜನಿಕ ಸೇವೆಯನ್ನು ಆನ್ಲೈನ್ ಮೂಲಕ ಪಡೆಯುವುದಕ್ಕೆ ಚಾಲನೆ ನೀಡುತ್ತಿದ್ದಂತೆಯೇ ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಅವರು, ಮೇಯರ್ ರವರು ಕಳೆದ 8 ತಿಂಗಳಿನಿಂದ ಸರ್ವಾಧಿಕಾರಿಯಾಗಿ ವತಿರ್ಸುತ್ತಿದ್ದಾರೆ. ತಮ್ಮ ವಾಸದ ವಸತಿ ಸಮುಚ್ಛಯದ ವಾಚ್ಮ್ಯಾನ್ ಪತ್ನಿ ಮೇಲೆ ಮೇಯರ್ ಕವಿತಾ ಸನಿಲ್ ಅವರೇ ಹಲ್ಲೆ ನಡೆಸಿ, ಬಳಿಕ ತಮ್ಮ ಪ್ರಭಾವ ಬಳಸಿಕೊಂಡು ಬಡ ದಂಪತಿಗಳ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಮಗುವನ್ನು ಎಸೆಯುವ ಮೂಲಕ ಚಾಂಪಿಯನ್ ಶಿಪ್‌ಗೆ ಚಾಲನೆ ನೀಡಿದ್ದಾರೆ ಎಂದು ವ್ಯಂಗ್ಯದ ಮಾತಿನ ಮೂಲಕ ವಿಪಕ್ಷ ನಾಯಕರು ಹಾಗೂ ಸದಸ್ಯರು ಮೇಯರ್ ವಿರುದ್ಧ ವಾಗ್ದಾಳಿ ಮುಂದುವರಿಸಿದರು.

ಇದೇ ವೇಳೆ ಆಡಳಿತ ಪಕ್ಷದ ಸದಸ್ಯ ವಿನಯ್ ರಾಜ್ ಮಾತನಾಡಿ, ಆ ಪ್ರಕರಣದ ಬಗ್ಗೆ ಮೇಯರ್ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಮಾತ್ರವಲ್ಲದೆ ಈ ಬಗ್ಗೆ ಪೊಲೀಸ್ ತನಿಖೆ ಆಗುತ್ತಿದೆ. ಮಹಿಳೆಗೆ ಅನ್ಯಾಯ ಆಗಿದ್ದ ಸಂದರ್ಭ ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗುವ ಬದಲು ಬಿಜೆಪಿ ಕಚೇರಿಗೆ ಕರೆದುಕೊಂಡು ಹೋಗುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸಿದರು.

ಈ ಸಂದರ್ಭ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪ- ಪ್ರತ್ಯಾರೋಪಗಳ ಸುರಿಮಳೆ ಆರಂಭವಾಗಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ವಿಪಕ್ಷ ಸದಸ್ಯರು ಮೇಯರ್ ವಿರುದ್ಧ ಧಿಕ್ಕಾರ ಕೂಗುತ್ತಾ ಪೀಠದೆದುರು ತೆರಳಿ, ಕೊಡಿ ಕೊಡಿ ಮೇಯರ್ ರಾಜೀನಾಮೆ ಕೊಡಿ ಎಂದು ಕೂಗಲಾರಂಭಿಸಿದರು

ಈ ಸಂದರ್ಭ ವಿಪಕ್ಷ ಸದಸ್ಯ ಮಧು ಕಿರಣ್ ವಿನಯ ರಾಜ್ ಇದ್ದತ್ತ ತೆರಳಿ ಅವರ ಕೈಯ್ಯಲ್ಲಿದ್ದ ಕಾರ್ಯಸೂಚಿ ಹಾಳೆಗಳನ್ನು ಎಳೆದು ಬಿಸಾಡಿದರು. ವಿಪಕ್ಷದ ಇತರ ಸದಸ್ಯರೂ ಬೊಬ್ಬಿಡುತ್ತಾ ವಿನಯ್ ರಾಜ್ ಅವರತ್ತ ಮುನ್ನುಗ್ಗಿದ್ದಾಗ, ಮುಖ್ಯ ಸಚೇತಕ ಶಶಿಧರ ಹೆಗ್ಡೆ ಹಾಗೂ ಮಾಜಿ ಮೇಯರ್ ಹರಿನಾಥ್ ರವರು ಅವರನ್ನು ತಡೆಯಲೆತ್ನಿಸಿದರು. ಈಸಂದರ್ಭ ಕೆಲ ಕ್ಷಣ ಸದನದಲ್ಲಿ ಹೊಯ್ಕೈ ವಾತಾವರಣ ಸೃಷ್ಟಿಯಾಯಿತು. ಪ್ರತಿಪಕ್ಷದ ಸದಸ್ಯರು ”ಡೌನ್ ಡೌನ್ ಮೇಯರ್”ಎಂದು ಕೂಗುತ್ತಿದ್ದರೆ, ಆಡಳಿತದ ಪಕ್ಷದ ಸದಸ್ಯರು ಮೇಯರ್ಗೆ ಜೈ ಎಂದು ಕೂಗಲಾರಂಭಿಸಿದರು.

ಅಷ್ಟರವರೆಗೆ ಮೌನವಾಗಿ ಆಲಿಸುತ್ತಿದ್ದ ಮೇಯರ್ ಮಧ್ಯ ಪ್ರವೇಶಿಸಿ, ನನಗೆ ಮಾತನಾಡಲು ಅವಕಾಶ ಕೊಡಿ. ನೀವು ಮಾತನಾಡುವುದನ್ನು ಕೇಳಿದ್ದೇನೆ. ನಾನು ಸ್ಪಷ್ಟೀಕರಣ ನೀಡುತ್ತೇನೆ ಎಂದಾಗ ಪ್ರತಿಪಕ್ಷ ಅದಕ್ಕೆ ಅವಕಾಶ ನೀಡಲಿಲ್ಲ. ಬದಲಾಗಿ ತಮ್ಮ ಘೋಷಣೆಗಳನ್ನು ಮತ್ತಷ್ಟು ಜೋರಾಗಿ ಕೂಗಲಾರಂಭಿಸಿದರು. ಪೀಠದ ಮೇಲಿದ್ದ ಮೇಯರ್ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿ ಸ್ವತಃ ಕಣ್ಣೀರಿಟ್ಟು, ದೇವರ ಮೇಲೆ ಪ್ರಮಾಣ ಮಾಡಿದರು.

”ನೀವೆಲ್ಲಾ ದೇವರನ್ನು ನಂಬುತ್ತೀರಾದರೆ, ಕಟೀಲು ಕ್ಷೇತ್ರದಲ್ಲಿ ಬಂದು ನಾನು ಹಲ್ಲೆ ಮಾಡಿದ್ದೇನೆಂದು ಹೇಳಿ. ಈ ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಮೇಯರ್ ಆಗಿ ನೋಡದೆ ಒಬ್ಬ ತಾಯಿ ನೆಲೆಯಲ್ಲಿ ನೋಡಿ. ನಾನೂ ಮಕ್ಕಳ ತಾಯಿ. ಕಟೀಲು ದುರ್ಗಾಪರಮೇಶ್ವರಿ ದೇವಿ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ನಾನು ಹಲ್ಲೆ ಮಾಡಿಲ್ಲ. ಆದರೆ ನನ್ನ ಮಗಳ ಪರಿಸ್ಥಿತಿ ಏನಾಗಿದೆ ಎಂದು ನೀವು ತಿಳಿದುಕೊಳ್ಳಿ” ಎಂದು ಹೇಳುತ್ತಾ ಅಷ್ಟರವರೆಗೂ ಗಟ್ಟಿತನ ಪ್ರದಶಿಸಿರ್ದ್ದ ಮೇಯರ್ ಗದ್ಗದಿತರಾದರು.

ನಾನು ಅನ್ಯಾಯ ಮಾಡಿದ್ದರೆ ನನಗೆ, ನೀವು ಮಾಡಿದ್ದರೆ ಅದನ್ನು ನೀವು ಅನುಭವಿಸುತ್ತೀರಾ” ಎಂದು ಹೇಳುತ್ತಾ, ಸಭೆಯನ್ನು ಸ್ಥಗಿತಗೊಳಿಸಿ ಸದನದಿಂದ ಹೊರ ನಡೆದರು. ಸುಮಾರು 12 ನಿಮಿಷಗಳ ಬಳಿಕ ಮತ್ತೆ ಮೇಯರ್ ಆಸನ ಸ್ವೀಕರಿಸಿದಾಗ ಮತ್ತೆ ಪ್ರತಿಪಕ್ಷ ಸದಸ್ಯರು ಮೇಯರ್ ವಿರುದ್ಧ ಧಿಕ್ಕಾರ ಮುಂದುವರಿಸಿದರು.

ಈ ನಡುವೆ ಮುಖ್ಯ ಸಚೇತಕರು ಕಾರ್ಯಸೂಚಿಯನ್ನು ಓದಿ ಒಪ್ಪಿಗೆ ಪಡೆದುಕೊಳ್ಳುವ ಮೂಲಕ ಸಭೆಯನ್ನು ಕೊನೆಗೊಳಿಸಲಾಯಿತು. ಮೇಯರ್ ಪೀಠದಿಂದ ತೆರಳಿದ ಬಳಿಕವೂ ವಿಪಕ್ಷ ಸದಸ್ಯರು ಘೋಷಣೆಯನ್ನು ಮುಂದುವರಿಸುತ್ತಲೇ ಸದನದಿಂದ ಹೊರನಡೆರು.
ಸಭೆಯಲ್ಲಿ ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗವೇಣಿ, ಸಬಿತಾ ಮಿಸ್ಕಿತ್, ಪ್ರತಿಭಾ ಕುಳಾಯಿ ಹಾಗೂ ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

Comments are closed.