ಮಂಗಳೂರು : ತುಳು ವಾಲ್ಮೀಕಿ ಎಂದು ಖ್ಯಾತರಾದ ದಿ.ಮಂದಾರ ಕೇಶವ ಭಟ್ಟರ ಜನ್ಮಶತಮಾನೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಅವರ ಮೇರುಕೃತಿ ‘ಮಂದಾರ ರಾಮಾಯಣ’ ತುಳು ಮಹಾಕಾವ್ಯದ ‘ಕಾವ್ಯ ರೂಪಕ’ ವನ್ನು ಬೆಂಗಳೂರು ದೂರದರ್ಶನದ ‘ಚಂದನ’ ವಾಹಿನಿ ಪ್ರಸಾರ ಮಾಡುತ್ತಿದೆ.
ಲೇಖಕ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ತುಳು-ಕನ್ನಡ ವ್ಯಾಖ್ಯಾನ ಮತ್ತು ನಿರೂಪಣೆಯೊಂದಿಗೆ ಮೂಡಿಬರುವ ಈ ದೃಶ್ಯಕಾವ್ಯದಲ್ಲಿ ಗಾಯಕ ಹಾಗೂ ಕೀರ್ತನಕಾರ ತೋನ್ಸೆ ಪುಷ್ಕಳ ಕುಮಾರ್ ಕಾವ್ಯವಾಚನ ಮಾಡುವರು. ಈಗಾಗಲೇ ಮಂದಾರ ರಾಮಾಯಣದ ಮೊದಲ ಸರ್ಗಗಳಾದ *’ಪುಂಚದ ಬಾಲೆ’* ಮತ್ತು *’ಬಂಗಾರ್ದ ತೊಟ್ಟಿಲ್’* ಎಂಬ ಎರಡು ಭಾಗಗಳನ್ನು ನಾಲ್ಕು ಕಂತುಗಳಾಗಿ ಚಿತ್ರೀಕರಿಸಿಕೊಳ್ಳಲಾಗಿದೆ.
ವಿದುಷಿ ರೇಷ್ಮಾ ನಿರ್ಮಲ್ ಭಟ್ ಅವರು ನೃತ್ಯ ಸಂಯೋಜಿಸಿ ಅಭಿನಯಿಸಿರುವ ಈ ಕಾವ್ಯರೂಪಕದಲ್ಲಿ ಕುಮಾರಿಯರಾದ ವಿಭಾಲಕ್ಷ್ಮಿ ರೈ ಕುಕ್ಕುವಳ್ಳಿ, ದೀಪಿಕಾ ಭಟ್,ಸ್ವಸ್ತಿಕಾ ರೈ ಹರೇಕಳ,ಶ್ರೀರಕ್ಷಾ,ರೇಷ್ಮ ಮತ್ತು ರಶ್ಮಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವರು. ಹಿನ್ನೆಲೆಯಲ್ಲಿ ಅಭಿಷೇಕ್ ಅವರ ಕೊಳಲು ವಾದನ ಮತ್ತು ನಿರ್ಮಲ್ ಭಟ್ ಕೊಣಾಜೆ ಅವರ ಸಹಕಾರವಿದೆ.
ಬೆಂಗಳೂರು ದೂರದರ್ಶನದ ಸಹಾಯಕ ನಿರ್ದೇಶಕಿ ಉಷಾ ಕಿಣಿ ಅವರು ನಿರ್ಮಿಸಿ ಪ್ರಸ್ತುತ ಪಡಿಸುವ ರೂಪಕವನ್ನು ಲಕ್ಷ್ಮೀ ಕಾರಂತ್ ಪ್ರಸಾರಕ್ಕೆ ಅಳವಡಿಸಿದ್ದಾರೆ.
‘ಪುಂಚದ ಬಾಲೆ’ ಕಾವ್ಯಭಾಗದ ಎರಡು ಕಂತುಗಳು ಕ್ರಮವಾಗಿ ನವೆಂಬರ್ 4,2017 ರಂದು ಶನಿವಾರ ಬೆಳಿಗ್ಗೆ ಗಂ.11ಕ್ಕೆ ಮತ್ತು ನ.5ರಂದು ಭಾನುವಾರ ಅಪರಾಹ್ನ ಗಂ.3.30 ಕ್ಕೆ ಪ್ರಸಾರವಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.