ಮಂಗಳೂರು, ಡಿಸೆಂಬರ್.29: ದ.ಕ.ಜಿಲ್ಲಾಡಳಿತ, ಜಿ.ಪಂ.ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆಯು ಗುರುವಾರ ನಗರದ ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಜರಗಿತು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ‘ವಿಶ್ವ ಮಾನವ ಕುವೆಂಪು’ ಎಂಬ ಕಿರುಹೊತ್ತಗೆಯನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಉಜಿರೆ ಎಸ್ ಡಿ ಎಂ ಕಾಲೇಜಿನ ಉಪನ್ಯಾಸಕ ಡಾ. ಸಂಪತ್ ಕುಮಾರ್ ಅವರು ಉಪನ್ಯಾಸ ನೀಡಿದರು. ವ್ಯಕ್ತಿ ಹುಟ್ಟುವಾಗ ವಿಶ್ವಮಾನವನಾಗಿದ್ದು, ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ. ಹೀಗಾಗಿ ಭಾಷೆ, ಪ್ರದೇಶ, ನಾಡು-ನುಡಿಗಳ ಮೇಲೆ ಅಭಿಮಾನವಿಟ್ಟು ಮತ್ತೆ ವಿಶ್ವಮಾನವರಾಗಬೇಕಾಗಿದೆ ಎಂದು ಕುವೆಂಪು ಪ್ರತಿಪಾದಿಸಿದ್ದರು. ಅದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಶೃತಿ ಜ್ಞಾನ, ಮತಿ ಜ್ಞಾನದ ಮೂಲಕ ಅನುಭೂತಿ ಜ್ಞಾನಕ್ಕೇರಬೇಕು ಎನ್ನುವುದು ಕುವೆಂಪು ಕಂಡುಕೊಂಡ ಸತ್ಯ. ಹೀಗಾಗಿಯೇ ಅವರು ಪಂಚ ತತ್ವ ಹಾಗೂ ಸಪ್ತ ಸೂತ್ರಗಳ ಮೂಲಕ ಬದುಕನ್ನು ರೂಪಿಸಲು ಸಲಹೆ ನೀಡುತ್ತಿದ್ದರು.ಜಾತಿ, ಮತಗಳನ್ನು ಮೀರಿ ಧರ್ಮಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂಬುದು ಕುವೆಂಪು ಅವರ ವಾದವಾಗಿತ್ತು ಎಂದು ಡಾ. ಸಂಪತ್ ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಭಾವಗೀತೆ ಹಾಗೂ ಕುವೆಂಪು ಅವರ ಚಿತ್ರ ಬಿಡಿಸುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ವಿದ್ಯಾರ್ಥಿನಿ ಕೆ.ಬಿಂದು ಕುವೆಂಪು ಅವರ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು.
ಶಾಸಕ ಮೊಯಿದಿನ್ ಬಾವಾ, ಮುಡಾ ಅಧ್ಯಕ್ಷ ಕೆ.ಸುರೇಶ್ ಬಳ್ಳಾಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ತಹಶೀಲ್ದಾರ್ ಸಿ.ಮಹದೇವಯ್ಯ, ಜಿಲ್ಲಾ ಯೋಜನಾ ನಿರ್ದೇಶಕ ಪ್ರಸನ್ನ, ವಾರ್ತಾಧಿಕಾರಿ ಖಾದರ್ ಷಾ, ಮುಖ್ಯಶಿಕ್ಷಕಿಯರಾದ ಶುಭಾ ಭಟ್, ಶೈಲಜಾ, ನಯನಾ ಶೆಣೈ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಡಿ.ಎಂ.ರವಿಕುಮಾರ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರ್ವಹಿಸಿದರು.